ಶಿವಮೊಗ್ಗ,ಜ.27 : ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಾರದಲ್ಲಿ ಐದು ದಿನಗಳ ಕೆಲಸದ ವ್ಯವಸ್ಥೆಯನ್ನು ತಕ್ಷಣವೇ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಬ್ಯಾಂಕ್ ನೌಕರರು ಇಂದು ಹಮ್ಮಿಕೊಂಡಿದ್ದ ರಾಷ್ಟ್ರವ್ಯಾಪಿ ಮುಷ್ಕರದ ಬಿಸಿ ಶಿವಮೊಗ್ಗಕ್ಕೂ ತಟ್ಟಿದೆ. ಒಂಬತ್ತು ಪ್ರಮುಖ ಬ್ಯಾಂಕ್ ಅಧಿಕಾರಿ ಮತ್ತು ನೌಕರರ ಸಂಘಟನೆಗಳ ಒಕ್ಕೂಟವಾದ ಯುಎಫ್‌ಬಿಯು ಕರೆ ನೀಡಿದ್ದ ಈ ಪ್ರತಿಭಟನೆಯಿಂದಾಗಿ ಜಿಲ್ಲೆಯಲ್ಲಿ ಬ್ಯಾಂಕಿಂಗ್ ವಹಿವಾಟು ಸ್ಥಗಿತಗೊಂಡಿತು.
ದೇಶಾದ್ಯಂತ ಸುಮಾರು 10 ಲಕ್ಷ ನೌಕರರು ಈ ಮುಷ್ಕರದಲ್ಲಿ ಪಾಲ್ಗೊಂಡಿದ್ದು, ಶಿವಮೊಗ್ಗದಲ್ಲಿಯೂ ಅಖಿಲ ಭಾರತೀಯ ಬ್ಯಾಂಕ್ ಸಂಘಗಳ ಮುಖಂಡರು ಬೀದಿಗಿಳಿದು ಹೋರಾಟ ನಡೆಸಿದರು. ನಗರದ ಬಿ.ಎಚ್. ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಮುಂದೆ ಜಮಾಯಿಸಿದ ನೌಕರರು, ಸರ್ಕಾರದ ಬ್ಯಾಂಕಿಂಗ್ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿದರು. ನಂತರ ಬಿ.ಎಚ್. ರಸ್ತೆಯಿಂದ ಸೀನಪ್ಪ ಶೆಟ್ಟಿ ವೃತ್ತದವರೆಗೆ ಬೃಹತ್ ಪ್ರತಿಭಟನಾ ಜಾಥಾ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ನೇತೃತ್ವ ಸಹಿಸಿದ್ದ ಸಂಘಟನೆಯ ಸಮನ್ವಯಕಾರ ನೆಲ್ಸನ್, ಐದು ದಿನಗಳ ಕೆಲಸದ ವಾರ ಜಾರಿಗೆ ಸಂಬಂಧಿಸಿದಂತೆ ಈಗಾಗಲೇ ಲಿಖಿತ ಒಪ್ಪಂದಗಳಾಗಿವೆ. ಹಲವು ಸುತ್ತಿನ ಮಾತುಕತೆಗಳು ನಡೆದಿದ್ದರೂ ಸಹ ಕೇಂದ್ರ ಸರ್ಕಾರದಿಂದ ಅಂತಿಮ ಅನುಮೋದನೆ ಸಿಗದಿರುವುದು ವಿಷಾದನೀಯ. ರಾಜಿ ಸಂಧಾನ ಸಭೆಗಳಲ್ಲಿ ಭಾಗವಹಿಸಿದರೂ ಯಾವುದೇ ಸ್ಪಷ್ಟ ಭರವಸೆ ಸಿಗದ ಕಾರಣ ಅನಿವಾರ್ಯವಾಗಿ ಮುಷ್ಕರ ನಡೆಸುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಸ್ತುತ ಬ್ಯಾಂಕ್‌ಗಳಲ್ಲಿ ಸಿಬ್ಬಂದಿ ಕೊರತೆ ನಡುವೆಯೂ ಕೆಲಸದ ಒತ್ತಡ ಹೆಚ್ಚಾಗಿದೆ. ಈಗಾಗಲೇ ಇನ್ಶೂರೆನ್ಸ್ ಕಂಪನಿಗಳು, ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ವಾರದಲ್ಲಿ ಐದು ದಿನಗಳ ಕೆಲಸ ಜಾರಿಯಲ್ಲಿದೆ. ಅದೇ ಮಾದರಿಯನ್ನು ವಾಣಿಜ್ಯ ಬ್ಯಾಂಕ್‌ಗಳಿಗೂ ವಿಸ್ತರಿಸಬೇಕು. ಆಧುನಿಕ ಬ್ಯಾಂಕಿಂಗ್‌ನಲ್ಲಿ ಎಟಿಎಂ ಮತ್ತು ಆನ್‌ಲೈನ್ ಸೇವೆಗಳು ಲಭ್ಯವಿರುವುದರಿಂದ ಗ್ರಾಹಕರಿಗೆ ಯಾವುದೇ ತೊಂದರೆಯಾಗದು ಎಂದು ಅವರು ಪ್ರತಿಪಾದಿಸಿದರು.
ಕೇಂದ್ರ ಸರ್ಕಾರದ ಪ್ರತಿಯೊಂದು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಬ್ಯಾಂಕ್ ನೌಕರರ ಪಾತ್ರ ದೊಡ್ಡದಿದೆ. ಇಂತಹ ಪರಿಸ್ಥಿತಿಯಲ್ಲಿ ನೌಕರರ ಮಾನಸಿಕ ಮತ್ತು ದೈಹಿಕ ಆರೋಗ್ಯದ ದೃಷ್ಟಿಯಿಂದ ವಾರದಲ್ಲಿ ಎರಡು ದಿನಗಳ ರಜೆ ಅತ್ಯಗತ್ಯ. ಸರ್ಕಾರ ಈ ಕೂಡಲೇ ಹಟಮಾರಿ ಧೋರಣೆ ಬಿಟ್ಟು ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
