ಗೋವುಗಳ ಅಕ್ರಮ ಸಾಗಾಟ: ಹೊನ್ನಾವರದ ಇಬ್ಬರು ಸೆರೆ

Kranti Deepa
ಸೊರಬ, ಏ.02 : ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗೋವುಗಳನ್ನು ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ರಕ್ಷಣೆ ಮಾಡಿದ ಘಟನೆ ತಾಲೂಕಿನ ಚಿತ್ರಟ್ಟೆಹಳ್ಳಿ ಕ್ರಾಸ್ ಬಳಿ ಬುಧವಾರ ನಡೆದಿದೆ.
ಹಿಂಸಾತ್ಮಕವಾಗಿ ನಾಲ್ಕು ಜಾನುವಾರುಗಳನ್ನು ಹೊನ್ನಾವರ ನೋಂದಣಿಯ ಪಿಕಪ್ ವಾಹನದಲ್ಲಿ ಸಾಗಾಟ ಮಾಡುತ್ತಿರುವುದನ್ನು ಗಮನಿಸಿದ ಹಿಂದೂ ಜಾಗರಣಾ  ವೇದಿಕೆ ಕಾರ್ಯಕರ್ತರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ವಾಹನ ಸಮೇತ ಜಾನುವಾರುಗಳನ್ನು ವಶಕ್ಕೆ ಪಡೆದು, ಹೊನ್ನಾವರ ತಾಲೂಕಿನ ಹಳದೀಪುರದ ವೆಂಕಟರಮಣ ಹಾಗೂ ತಾಲೂಕಿನ ಸಮನವಳ್ಳಿ ಗ್ರಾಮದ ಸೋಮಶೇಖರ ಎಂಬುವವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಯಾವುದೇ ಪರವಾನಗಿ ಇಲ್ಲದೇ ಹಿಂಸಾತ್ಮಕವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ನೀಡಿದ ದೂರಿನ ಅನ್ವಯ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾನುವಾರುಗಳನ್ನು ರಕ್ಷಿಸಿದ ಕಾರ್ಯಕರ್ತರು ಅವುಗಳನ್ನು ಸಾಗರ ತಾಲೂಕಿನ ವರದಮೂಲದ ಪುಣ್ಯಕೋಟಿ ಗೋ ಶಾಲೆಗೆ ಕಳುಹಿಸಿದ್ದಾರೆ.

Share This Article
";