ಶಿವಮೊಗ್ಗ,ಜ.16 : ನಾಲ್ಕು ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದನನ್ನಾಗಿ ಆಯ್ಕೆ ಮಾಡಿದ ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ದಿ ಕಾರ್ಯಗಳನ್ನು ಮಾಡುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಹೇಳಿದರು.ಶುಕ್ರವಾರ ಪತ್ರಿಕಾ ಭವನದಲ್ಲಿ ಪ್ರೆಸ್‌ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಭಿವೃದ್ದಿಯಲ್ಲಿ 2 ವಿಧ.ಕೇಂದ್ರ ಸರ್ಕಾರ ಮಾಡುವ ಅಭಿವೃದ್ದಿ ಕಾರ್ಯ ಹಾಗೂ ಸಂಸದನಾಗಿ ನಾನು ಮಾಡುವ ಅಭಿವೃದ್ದಿ ಯೋಜನೆಗಳು ಇವೆ ಎಂದರು.
ಪ್ರಧಾನಿ ಮೋದಿಯವರ ಸ್ವಚ್ಛಭಾರತದ ಅಡಿಯಲ್ಲಿ ಪ್ರತೀ ಹಳ್ಳಿಗೂ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಸ್ವಚ್ಛತೆ, ಅನಿಲ ಸಂಪರ್ಕ, ಕುಡಿಯುವ ನೀರಿನ ವ್ಯವಸ್ಥೆ, ರಾಷ್ಟ್ರೀಯ ಹೆದ್ದಾರಿ, ರಸ್ತೆಗಳು, ಮನೆ, ಮೊಬೈಲ್ ಟವರ್‌ಗಳು, ರೈಲ್ವೆ ಅಭಿವೃದ್ಧಿ ಸೇರಿದಂತೆ ಹಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡು ಸಾಕಷ್ಟು ಅಭಿವೃದ್ಧಿಗಳನ್ನು ಮಾಡಲಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲೂ ಕೂಡ ಹಲವು ಅಭಿವೃದ್ಧಿಗಳು ಈಗಾಗಲೇ ಮುಗಿದಿವೆ ಎಂದರು.
ಕೋಟೆಗಂಗೂರಿನ ರೈಲ್ವೆ ಟರ್ಮಿನಲ್ ಕಾಮಗಾರಿ ಪೂರ್ಣಗೊಳ್ಳುವುದು ಅತ್ಯಗತ್ಯವಾಗಿದೆ. ಇದು ಆದರೆ ಶಿವಮೊಗ್ಗಕ್ಕೆ ರೈಲಿನ ಸಂಪರ್ಕ ಹೆಚ್ಚಾಗಲಿದೆ ಎಂದ ಅವರು, ಕೋಟೆಗಂಗೂರಿನಲ್ಲಿ ನಿರ್ಮಾಣವಾಗುತ್ತಿರುವ ಹೊಸ ರೈಲ್ವೆ ಟರ್ಮಿನಲ್ ಶಿವಮೊಗ್ಗ ನಗರಕ್ಕೆ ಪರ್ಯಾಯ ಕೇಂದ್ರವಾಗಲಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಲು ಹಾದಿ ಸುಗಮವಾಗಲಿದೆ ಎಂದರು.
ಜಿಲ್ಲೆಯ ಎಲ್ಲಾ ತಾಲೂಕುಗಳಿಗೂ ರೈಲು ಸಂಪರ್ಕ ಕಲ್ಪಿಸುವುದು ನನ್ನ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ರೈಲ್ವೆ ಮಾರ್ಗದ ಕಾಮಗಾರಿಗೆ ಸಂಬಂಧಿಸಿದಂತೆ ಕಾರ್ಯ ಪ್ರಗತಿಯಲ್ಲಿದೆ. ಶಿವಮೊಗ್ಗ-ಶಿಕಾರಿಪುರ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಶಿಕಾರಿಪುರದಿಂದ ರಾಣೆಬೆನ್ನೂರು ಮಾರ್ಗ ದ ಭೂ ಸ್ವಾಧೀನ ಪ್ರಕ್ರಿಯೆ ಈಗಾಗಲೇ ಶೇ.75 ರಷ್ಟು ಪೂರ್ಣಗೊಂಡಿದೆ. ರೈತರಿಗೆ ಪರಿಹಾರದ ಹಣವನ್ನು ವಿತರಿಸಲು ಇನ್ನೂ ಸುಮಾರು 100 ಕೋಟಿ ರೂಪಾಯಿಗಳ ಅನುದಾನದ ಅವಶ್ಯಕತೆಯಿದೆ. ಈ ಭೂಸ್ವಾಧೀನ ಪ್ರಕ್ರಿಯೆಯು ಒಟ್ಟಾರೆ ಶೇ.90 ರಷ್ಟು ಪೂರ್ಣಗೊಂಡ ತಕ್ಷಣವೇ ರೈಲ್ವೆ ಇಲಾಖೆಯು ಕಾಮಗಾರಿಯ ಟೆಂಡರ್ ಪ್ರಕ್ರಿಯೆಯನ್ನು ಆರಂಭಿಸಲಿದೆ.
ಶಿವಮೊಗ್ಗ ನಗರದ ಗುಂಡಪ್ಪ ಶೆಡ್, ವಿದ್ಯಾನಗರದ ಅಂಡರ್ ಪಾಸ್ ಕಾಮಗಾರಿಗಳು ಶೀಘ್ರ ಆರಂಭವಾಗಲಿವೆ. ಅಲ್ಲದೆ, ಫ್ರೀಡಂ ಪಾರ್ಕ್ ಬಳಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಸಿ.ಆರ್.ಎಫ್. ಅನುದಾನದಡಿ ಹೊಸ ಮೇಲ್ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದಕ್ಕೆ ಬಜೆಟ್‌ನಲ್ಲಿ ಒಪ್ಪಿಗೆ ದೊರೆತಿದೆ ಎಂದು ವಿವರಿಸಿದರು.247 ಕಾಮಗಾರಿಗಳ ಮೂಲಕ 1,177 ಕಿಲೋ ಮೀಟರ್ ಗ್ರಾಮೀಣ ರಸ್ತೆಯನ್ನು, 528 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಹೊಸಬಜೆಟ್‌ನಲ್ಲಿಯೂ ಸಹ 380 ಕೋಟಿ ಬೇಡಿಕೆಯನ್ನು ಸಲ್ಲಿಸಿದ್ದೇನೆ. ಜಿಲ್ಲೆಯಲ್ಲಿ 398 ಬಿ.ಎಸ್.ಎನ್.ಎಲ್. ಟವರ್‌ಗಳನ್ನು ನಿರ್ಮಿಸುವ ಉದ್ದೇಶ ಹೊಂದಿದ್ದು, ಈಗಾಗಲೇ 232 ಮುಗಿದಿವೆ ಎಂದರು.
ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಗೆ ಬೀಗ ಹಾಕುವುದನ್ನು ನಾನು ತಪ್ಪಿಸಿದ್ದೇನೆ. ಅಲ್ಲಿ ಇನ್ನೂ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಅದಕ್ಕೆ ಕೇಂದ್ರ ಸರ್ಕಾರದ ಅನುದಾನದಿಂದ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸಲು ನಿರ್ಧರಿಸಲಾಗಿದೆ. ಹಾಗೆಯೇ ಜಿಲ್ಲೆಯ ಎಲ್ಲಾ ಕೋರ್ಟ್‌ಗಳಲ್ಲಿ ಪೀಠೋಪಕರಣಕ್ಕಾಗಿ ತಲಾ 25 ಲಕ್ಷ ರೂ. ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇನೆ. ಮತ್ತು ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ಮಳೆಮಾಪನ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಬಹಳ ದಿನಗಳಿಂದ ನಿರೀಕ್ಷೆಯಲ್ಲಿರುವ ಎಫ್‌ಎಂ ಕೇಂದ್ರ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ. ಸಿಗಂಧೂರು ಸೇತುವೆಯಂತೆ ಹಸಿರುಮಕ್ಕಿ ಸೇತುವೆಗೂ ಕೂಡ ಬಿಜೆಪಿ ಅವಧಿಯಲ್ಲಿ 50 ಕೋಟಿ ಹಣವನ್ನು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು ನೀಡಿದ್ದರು. ವಿಮಾನ ನಿಲ್ದಾಣದಲ್ಲಿ ಬಾಕಿ ಇರುವ ನೈಟ್ ಲ್ಯಾಂಡಿಂಗ್ ಕಾಮಗಾರಿಗೆ ಉಪಕರಣಗಳು ನಿಲ್ದಾಣ ತಲುಪಿವೆ. ಇದನ್ನು ಅಳವಡಿಸಲು ಬೇಕಾದಂತಹ 6 ಕೋಟಿ ಹಣವನ್ನು ರಾಜ್ಯಸರ್ಕಾರ ಮಂಜೂರು ಮಾಡಬೇಕಾಗಿದೆ. ಉಪಕರಣ ಜೋಡಣೆಯಾದರೆ ನೈಟ್ ಲ್ಯಾಂಡಿಂಗ್ ಸುಗಮವಾಗುತ್ತದೆ., ಆಗ ವಿಮಾನಗಳ ಸಂಚಾರವೂ ಕೂಡ ಅಧಿಕವಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ವಹಿಸಿದ್ದರು. ಕಾರ್ಯದರ್ಶಿ ನಾಗರಾಜ್ ನೇರಿಗೆ ಪತ್ರಕರ್ತರ ಸಂಘದ ಅಧ್ಯಕ್ಷ ವೈದ್ಯ, ಪ್ರಧಾನ ಕಾರ್ಯದರ್ಶಿ ಹಾಲಸ್ವಾಮಿ ಉಪಸ್ಥಿತರಿದ್ದರು.
