ಏ.16 ರಂದು ಶರಾವತಿ ಪಂಪ್ಡ್ ಯೋಜನೆ ವಿರೋಧಿಸಿ ಶಿವಮೊಗ್ಗದಲ್ಲಿ ಬೃಹತ್ ಸೈಕಲ್-ಕಾರು-ಬೈಕ್ ಜಾಥಾ

Kranti Deepa

ಶಿವಮೊಗ್ಗ,ಏ.11 : ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ವಿರೋಧಿಸಿ ಶಿವಮೊಗ್ಗದಲ್ಲಿ ಏ.16 ರಂದು ಬೆಳಿಗ್ಗೆ 10.30 ಕ್ಕೆ ವಿವಿಧ ಸಂಘಟನೆಗಳಿಂದ ಬೃಹತ್ ಸೈಕಲ್, ಕಾರ್, ಬೈಕ್ ಸೇರಿದಂತೆ ದ್ವಿಚಕ್ರ ವಾಹನಗಳ ರ್‍ಯಾಲಿ ನಗರದಾದ್ಯಂತೆ ನಡೆಯಲಿದೆ ಎಂದು ಶಿವಮೊಗ್ಗ ಸೈಕಲ್ ಕ್ಲಬ್, ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿಯ ಪ್ರಮುಖರಾದ ಅ.ನಾ. ವಿಜಯೇಂದ್ರರಾವ್ ಹೇಳಿದ್ದಾರೆ.

ರಾಷ್ಟ್ರಭಕ್ತರ ಬಳಗ, ಶಿವಮೊಗ್ಗ ಸೈಕಲ್ ಕ್ಲಬ್, ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ, ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಅಧ್ಯಯನ ವೇದಿಕೆ, ವೈ.ಹೆಚ್.ಎ.ಐ. ತರುಣೋದಯ ಘಟಕದ ಸಂಯುಕ್ತಾಶ್ರಯದಲ್ಲಿ ಈ ಬೃಹತ್ ವಾಹನ ಜಾಥಾ ಹಮ್ಮಿಕೊಳ್ಳಲಾಗಿದ್ದು, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಪರಿಸರಕ್ಕೆ, ಜೀವ ಸಂಕುಲಕ್ಕೆ ಆರ್ಥಿಕವಾಗಿ, ಸಾಂಸ್ಕೃತಿಕವಾಗಿ, ಐತಿಹಾಸಿಕವಾಗಿ, ಪಶ್ಚಿಮ ಘಟ್ಟಗಳಿಗೆ ಆಗುತ್ತಿರುವ ಹಾನಿಯನ್ನು ಮನಗೊಂಡು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಯೋಜನೆಯನ್ನು ಕೂಡಲೇ ರದ್ದುಗೊಳಿಸಬೇಕೆಂದು ಆಗ್ರಹಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಡಾ||ಶೇಖರ್ ಗೌಳೇರ್ ಮಾತನಾಡಿ, ಈ ಯೋಜನೆಯಿಂದ ಶರಾವತಿ ಸಿಂಘಳೀಕ ಅಭಯಾರಣ್ಯದಲ್ಲಿ ಇರುವ ಸಂಘಳೀಕ ಸಂತತಿಯ ವಿನಾಶಕ್ಕೆ ಕಾರಣವಾಗುತ್ತದೆ. 10,700 ಕೋಟಿ ರೂ.ಗಳ ಈ ಯೋಜನೆಯಿಂದ ರಾಜ್ಯ ಸರ್ಕಾರಕ್ಕೆ  ಯಾವುದೇ ಆರ್ಥಿಕ ಲಾಭ ಇರುವುದಿಲ್ಲ. 16 ಸಾವಿರ ಅಪರೂಪದ ಹಾಗೂ ಪಶ್ಚಿಮಘಟ್ಟಗಳಲ್ಲಿ ಮಾತ್ರ ಕಾಣಸಿಗುವ ಅಪರೂಪದ ಮರಗಳ ನಾಶವಾಗಲಿದ್ದು, 11,900 ಕೋಟಿ ರೂ. ನಷ್ಟವಾಗಲಿದೆ. 18 ಸಾವಿರ ಟನ್ ಅಪಾಯಕಾರಿ ವಿಸ್ಫೋಟಕ ಬಳಕೆಯಿಂದ ಮುಂದಿನ ದಿನಗಳಲ್ಲಿ ಈ ಯೋಜನಾ ಪ್ರದೇಶದಲ್ಲಿ ಭೂಕಂಪ ಹಾಗೂ ಭೂಕುಸಿತ ಆಗುವ ಸಾಧ್ಯತೆಯಿದೆ ಎಂದು ಐಎಫ್‌ಎಸ್ ಅಧಿಕಾರಿ ಪ್ರಣೀತಾ ಕೌಲ್ ಅವರು ಈಗಾಗಲೇ ಕೇಂದ್ರಕ್ಕೆ ವರದಿಯನ್ನು ನೀಡಿದ್ದು, ಕೆಪಿಸಿಎಲ್‌ನವರು ಅದನ್ನು ಕಡೆಗಣಿಸಿ ಈ ಯೋಜನೆ ಮಾಡಲು ಹೊರಟಿದ್ದಾರೆ.

ಸೌರಶಕ್ತಿ, ಪವನಶಕ್ತಿ, ಬ್ಯಾಟರಿ ಸ್ಟೋರೇಜ್‌ನಂತಹ ಪರ್ಯಾಯ ಇಂಧನ ಉತ್ಪತ್ತಗೆ ಅವಕಾಶ ಹಾಗೂ ಹೆಚ್ಚು ಆರ್ಥಿಕ ಲಾಭ ಮತ್ತು ಪರಿಸರ ಸ್ನೇಹಿ ಮತ್ತು ಕಡಿಮೆ ಬಂಡವಾಳದ ಅವಕಾಶ ಇರುವುದರಿಂದ ಈ ಯೋಜನೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಿಂಪೆಯಬೇಕೆಂದು ಒತ್ತಾಯಿಸುತ್ತಿದ್ದೇವೆಂ ಎಂದರು.

ಈ ಜಾಥಾದಲ್ಲಿ 500 ಕ್ಕೂ ಹೆಚ್ಚು ಸೈಕಲ್‌ಗಳು, 200 ಕಾರುಗಳು, 300 ದ್ಚಿಚಕ್ರವಾಹನಗಳು ಭಾಗವಹಿಸಲಿದೆ. ಸೈಕಲ್ ಜಾಥಾ ಫ್ರೀಡಂಪಾರ್ಕ್‌ನಿಂದ ಹೊರಟು, ಜೈಲ್ ಸರ್ಕಲ್, ಅಮೀರ್ ಅಹ್ಮದ್ ಸರ್ಕಲ್, ಬೆಕ್ಕಿನಕಲ್ಮಠದವರೆಗೆ ಹೋಗಿ ಮಹಾವೀರ ವೃತ್ತಿಕ್ಕೆ ತಲುಪಲಿದೆ. ಕಾರು ಹಾಗೂ ಇತರ ವಾಹನಗಳ ಜಾಥಾವು ಫ್ರೀಡಂಪಾರ್ಕ್‌ನಿಂದ ಹೊರಟು ಪೊಲೀಸ್ ಚೌಕಿ, ಆದಿಚುಂಚನಗಿರಿ ರಸ್ತೆ, ಗುತ್ತಿ ನರ್ಸಿಂಗ್ ಹೋಂ, ಎಲ್‌ಎಲ್‌ಆರ್ ರಸ್ತೆ, ಗೋಪಿ ಸರ್ಕಲ್, ಎ.ಎ. ಸರ್ಕಲ್, ಗಾಂಧಿಬಜಾರ್, ರಾಮಣ್ಣ ಶ್ರೇಷ್ಠಿ ಪಾರ್ಕ್, ಬೆಕ್ಕಿನಕಲ್ಮಠಕ್ಕೆ ತೆರಳಿ ಮಹಾವೀರ ಸರ್ಕಲ್‌ಗೆ ಬರಲಿದ್ದು ಅಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಎಂದರು.

ಫ್ರೀಡಂಪಾರ್ಕ್‌ನಲ್ಲಿ ಮೆರವಣಿಗೆ ಪ್ರಾರಂಭಕ್ಕೂ ಮುನ್ನ ಈ ಜಾಥಾದ ಉದ್ದೇಶ ಮತ್ತು ಹೋರಾಟದ ಅನಿವಾರ್‍ಯತೆಯ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು. ವಿದ್ಯಾರ್ಥಿಗಳು, ಸಾರ್ವಜನಿಕರು, ವಾಹನ ಹೊಂದಿರುವ ಎಲ್ಲರೂ ಈ ಜಾಥಾದಲ್ಲಿ ಪಾಲ್ಗೊಳ್ಳುವಂತೆ ಅವರು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ||ಶ್ರೀಪತಿ, ರಾಷ್ಟ್ರಭಕ್ತ ಬಳಗದ ಶ್ರೀಕಾಂತ್, ಪರಿಸರ ರಮೇಶ್, ವಾಗೀಶ್, ದಿಲೀಪ್‌ನಾಡಿಗ್, ಜನಾರ್ಧನ್ ಪೈ, ಚನ್ನವೀರಪ್ಪ ಗಾಮನಗಟ್ಟಿ ಮತ್ತಿತರರಿದ್ದರು.

Share This Article
";