ಶಿವಮೊಗ್ಗ, ಅ.11 : ಮುಂದಿನ ಶೈಕ್ಷಣಿಕ ವರ್ಷದಿಂದ ತೀರ್ಥಹಳ್ಳಿಯಲ್ಲಿ ವಿಶೇಷ ಚೇತನರಿಗೆ ವಸತಿಶಾಲೆ ಸ್ಥಾಪಿಸುವ ಯೋಜನೆ, ಇಲಾಖೆಯ ಮೂಲಕ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಬೆಂಗಳೂರಿನಲ್ಲಿ ಕಿದ್ವಾಯ್ ಆಸ್ಪತ್ರೆ ಸಮೀಪ ಉಚಿತ ಚಿಕಿತ್ಸೆ ಸಹಿತ 1 ರಿಂದ 10 ನೇ ತರಗತಿ ಮಕ್ಕಳಿಗೆ ವಸತಿ ಶಾಲೆ ಸ್ಥಾಪಿಸುವ ಯೋಜನೆ ಇದೆ. ಇದಕ್ಕೆ ಸಂಬಂಧಿಸಿದಂತೆ ಇನ್‌ಫೋಸೀಸ್ ಮುಖ್ಯಸ್ಥೆ ಸುಧಾಮೂರ್ತಿಯವರೊಡನೆ ಚರ್ಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಅವರು ಶನಿವಾರ ಮಾಧ್ಯಮದವರೊಡನೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.ಇಲ್ಲಿಯವರೆಗೆ ರಾಜ್ಯದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಇದ್ದ 500 ಕೆಪಿಎಸ್ ಶಾಲೆಗಳ ಜೊತೆಯಲ್ಲಿ ಇನ್ನೂ 300 ಕೆಪಿಎಸ್ ಶಾಲೆ ಆರಂಭಿಸಲಾಗುವುದು. ಶಿವಮೊಗ್ಗ ಜಿಲ್ಲೆಯಲ್ಲಿಯೇ ಇನ್ನೂ ಹೆಚ್ಚುವರಿಯಾಗಿ 13 ಕೆಪಿಎಸ್ ಶಾಲೆಗಳನ್ನು ತೆರೆಯಲಾಗುವುದು. ಶಾಲೆಗಳಲ್ಲಿ ವಾರಕ್ಕೆ ಒಂದು ಅವಧಿ ನೈತಿಕ ಶಿಕ್ಷಣ ಜಾರಿಗೆ ತರುವ ಆಲೋಚನೆ ಇದೆ. 1995 ರ ವರೆಗೆ ಆರಂಭಿಸಲಾದ ಶಾಲೆಗಳಿಗೆ ಸರ್ಕಾರ ಅನುದಾನ ನೀಡಿದ್ದು, ಇದನ್ನು 2005 ರ ವರೆಗೆ ಆರಂಭಿಸಲಾದ ಶಾಲೆಗಳಿಗೂ ವಿಸ್ತರಿಸಲಾಗುವುದು ಎಂದರು.
ಗುಣಮಟ್ಟ ಸಾಧಿಸುವಲ್ಲಿ ಯಶಸ್ವಿ:
ಶಿಕ್ಷಣದಲ್ಲಿ ಸಮಾನತೆ ಮತ್ತು ಗುಣಮಟ್ಟ ಸಾಧಿಸುವಲ್ಲಿ ಯಶಸ್ವಿಯಾಗಿದ್ದೇನೆ . ಇಲಖೆಯನ್ನು ಅತ್ಯಂತ ನಿಷ್ಠೆ ಮತ್ತು ಗೌರವದಿಂದ ನಿಭಾಯಿಸಿದ್ದೇನೆ. ತಂದೆ ಎಸ್. ಬಂಗಾರಪ್ಪನವರೇ ನನಗೆ ಗುರು.ಅವರ ಜೊತೆಯಲ್ಲಿ ಬಹಳ ಕಾಲ ರಾಜಕೀಯದಲ್ಲಿ ಕೆಲಸ ಮಾಡಿದ್ದರಿಂದ ಸ್ವಾಭಾವಿಕವಾಗಿಯೇ ಯಾವುದೇ ಸವಾಲನ್ನು ಸ್ವೀಕರಿಸುವ ಗುಣ ನನ್ನಲ್ಲಿ ಬಂದಿದೆ. ಇದರ ಪರಿಣಾಮ ಸಮಸ್ಯೆಗಳ ಗೂಡಾಗಿರುವ ಶಿಕ್ಷಣ ಇಲಾಖೆಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದರು.
ಇದೊಂದು ದೊಡ್ಡ ಇಲಾಖೆ, ಸವಾಲಿನ ಮತ್ತು ಜವಾಬ್ದಾರಿಯ ಇಲಾಖೆ. ಈ ಇಲಾಖೆಯಡಿ ರಾಜ್ಯದಲ್ಲಿ 46 ಸಾವಿರ ಶಾಲೆಗಳು ಬರುತ್ತವೆ. ಇಲಾಖೆಯಲ್ಲಿನ ಶೇ.70 ರಷ್ಟು ಸಮಸ್ಯೆಗಳನ್ನು ಬಗೆಹರಿಸಿದ ತೃಪ್ತಿ ನನಗಿದೆ. 18,000 ಶಿಕ್ಷಕರ ನೇಮಕಾತಿಗೆ ಪ್ರಕ್ರಿಯೆಗಳು ಆರಂಭವಾಗಿವೆ. ಒಂದು ಸರ್ಕಾರಿ ಶಾಲೆಯಲ್ಲಿ ಕೇವಲ 1 ಮಗುವಿದ್ದರೂ ಅದನ್ನು ಮುಚ್ಚುವ ಪ್ರಸ್ತಾಪ ವನ್ನು ನಾನು ಮಾಡಿಲ್ಲ. ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡುವುದೇ ನನ್ನ ಇಲಾಖೆಯ ಪ್ರಮುಖ ಉದ್ದೇಶ ಎಂದು ಭಾವಿಸಿದ್ದೇನೆ. ಮಕ್ಕಳಲ್ಲಿ ಸಾಮಥ್ರ್ಯ ವೃದ್ಧಿಸಲು ಮೂರು ಪರೀಕ್ಷಾ ಪದ್ಧತಿಯನ್ನು ಜಾರಿಗೆ ತಂದಿದ್ದಲ್ಲದೆ ವೆಬ್‌ಕಾಸ್ಟ್ ಮೂಲಕ ನಕಲು ತಡೆಗೆ ಮುಂದಾಗಿದ್ದೇನೆ. ಇದು ಶಾಲಾ ಶಿಕ್ಷಣ ಪದ್ಧತಿಯಲ್ಲಿ ಮಹತ್ವಪೂರ್ಣ ಬದಲಾವಣೆಗೆ ಮುನ್ನುಡಿ ಬರೆದಿದೆ ಎಂದರು.
ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ನಾಗರಾಜ್ ನೇರಿಗೆ, ಹೊನ್ನಾಳಿ ಚಂದ್ರಶೇಖರ್ ಉಪಸ್ಥಿತರಿದ್ದರು.