ಜ. 22: ಕೃಷಿ ವಿವಿ ಘಟಿಕೋತ್ಸವ: ಕಾಗೋಡಿಗೆ ಗೌರವ ಡಾಕ್ಟರೇಟ್

Kranti Deepa

ಶಿವಮೊಗ್ಗ,ಜ. 20 : ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವವನ್ನು ದಿನಾಂಕ:22-01-2025 ಇರುವಕ್ಕಿಯಲ್ಲಿರುವ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಪತ್ರಿಕಾಗೋಷ್ಢಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ವಿವಿಯ ಕುಲಪತಿ ಪ್ರೊ. ಜಗದೀಶ್, ರಾಜ್ಯಪಾಲರು ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆದ . ಥಾವರ್‌ಚಂದ ಗೆಹ್ಲೋಟ್ ಪದವಿ ಸಂಪೂರ್ಣಗೊಳಿಸಿದವರಿಗೆ ಪದವಿ ಪ್ರದಾನ ಮಾಡಲಿದ್ದಾರೆ. ಕೃಷಿ ಸಚಿವ ಚಲುವರಾಯಸ್ವಾಮಿ ಘಟಿಕೋತ್ಸವಕ್ಕೆ ಚಾಲನೆ ನೀಡುವರು.

ಪ್ರೊ. ಎಲ್ .ಎಸ್. ಶಶಿಧರ, ನಿರ್ದೇಶಕರು, ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರ ಮತ್ತು ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ, ಬೆಂಗಳೂರು ಒಂಬತ್ತನೇ ಘಟಿಕೋತ್ಸವ ಭಾಷಣವನ್ನು ಮಾಡಲಿದ್ದಾರೆ ಎಂದರು ಘಟಿಕೋತ್ಸವದಲ್ಲಿ ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳು, ಶೈಕ್ಷಣಿಕ ಪರಿಷತ್ತಿನ ಸದಸ್ಯರುಗಳು, ವಿಶ್ರಾಂತ ಕುಲಪತಿಗಳು, ಡೀನ್‌ಗಳು ಮತ್ತು ನಿರ್ದೇಶಕರು, ವಿಶ್ರಾಂತ ಅಧಿಕಾರಿಗಳು ಹಾಗೂ ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳು, ಆಹ್ವಾನಿತ ಗಣ್ಯರು, ಗೌರವಾನ್ವಿತ ಪದಕ ದಾನಿಗಳು, ವಿದ್ಯಾರ್ಥಿಗಳು ಅವರ ತಂದೆ, ತಾಯಿ ಪೋಷಕರು ಭಾಗವಹಿಸಲಿದ್ದಾರೆ ಎಂದರು.

ಒಂಬತ್ತನೇ ಘಟಿಕೋತ್ಸವದಲ್ಲಿ ಒಟ್ಟು 994 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. 793 ವಿದ್ಯಾರ್ಥಿಗಳು ಕೃಷಿ, ತೋಟಗಾರಿಕೆ, ಅರಣ್ಯ ವಿಭಾಗಗಳಲ್ಲಿ ಪದವಿ ಹಾಗೂ 176 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಹಾಗೂ 25 ವಿದ್ಯಾರ್ಥಿಗಳು ಪಿ.ಹೆಚ್.ಡಿ. ಪದವಿ ಪಡೆಯುತ್ತಿದ್ದಾರೆ. ಇವರಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿದ 17 ಪದವಿ ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ ಎಂದರು.  ಅವರಿಗೆ ಒಟ್ಟು 31 ಚಿನ್ನದ ಪದಕಗಳನ್ನು ನೀಡಲಾಗುವುದು. 28 ಎಂ.ಎಸ್ಸಿ. ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

ಅವರಿಗೆ ಒಟ್ಟು 33 ಚಿನ್ನದ ಪದಕಗಳನ್ನು ನೀಡಲಾಗುವುದು. 10 ಪಿ.ಹೆಚ್.ಡಿ. ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಅವರಿಗೆ ಒಟ್ಟು 12 ಚಿನ್ನದ ಪದಕಗಳನ್ನು ನೀಡಲಾಗುವುದು ಎಂದು ಹೇಳಿದರು.

 ಕಾಗೋಡು ತಿಮ್ಮಪ್ಪನವರು ಕೃಷಿಕರು, ಕೃಷಿ ವ್ಯವಸ್ಥೆಗೆ ಬೆಂಬಲವಾಗಿದ್ದು ಜನೋಪಯೋಗಿ ಕಾರ್ಯವನ್ನೇ ರಾಜಕಾರಣ ಎಂದೆಣಿಸಿದವರು ಹಾಗೂ ಸಮಾಜವಾದಿ ಚಿಂತಕರು. ಗ್ರಾಮೀಣ ಬದುಕನ್ನು ಹಸನಾಗಿಸುವ ನಿಟ್ಟಿನಲ್ಲಿ ಇವರ ಪರಿಶ್ರಮ ಅಪಾರ. ಇದು ಇವರನ್ನು ಕರ್ನಾಟಕ ಅಪರೂಪದ ವ್ಯಕ್ತಿಯನ್ನಾಗಿಸಿದೆ. ಇವರು ಕೃಷಿ ವ್ಯವಸ್ಥೆ ಗ್ರಾಮೀಣ ಬದುಕನ್ನು ಹಸನು ಮಾಡಲು ಶ್ರಮಿಸಿದ ಸೇವೆ ಹಾಗೂ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ಅಭಿವೃದ್ಧಿಪಡಿಸುವಲ್ಲಿ ಮಾಡಿದ ಅವರ ಸೇವೆ ಸ್ಮರಿಸಿ ಗೌರವಿಸಲು ಅವರಿಗೆ ಈ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ.

Share This Article
";