ಜೇಡಿಕಟ್ಟೆಯಲ್ಲಿ ಹಾಡಹಗಲೇ ಮನೆ ಕಳ್ಳತನ

Kranti Deepa

 ಭದ್ರಾವತಿ, ಫೆ. 20 : ನಗರದ ಜೇಡಿಕಟ್ಟೆಯ ಬಿ.ಹೆಚ್.ರಸ್ತೆಯಲ್ಲಿರುವ ವೇಬ್ರಿಡ್ಜ್ ಜಂಡಾಕಟ್ಟೆ ಬಳಿಯ ಟ್ಯಾಂಕರ್ ಡ್ರೈವರ್ ತಾಜುದ್ದೀನ್ ಎಂಬುವರ ಮನೆಯಲ್ಲಿ ಬುಧವಾರ ಮಧ್ಯಾಹ್ನ ಬಾಗಿಲು ಮುರಿದು ಹಾಡಹಗಲಿನಲ್ಲಿ ಕಳ್ಳತನ ಮಾಡಿರುವ ಪ್ರಕರಣ ನಡೆದಿದೆ.

ಮನೆಯ ಯಜಮಾನ ತಾಜುದ್ದೀನ್ ಪೆಟ್ರೋಲ್ ಟ್ಯಾಂಕರ್ ಚಾಲಕರಾಗಿದ್ದು ಕೆಲಸದ ಮೇಲೆ ಹೋಗಿದ್ದರು, ಮಗಳು ಪ್ರೌಢಶಾಲೆಗೆ ಹೋಗಿದ್ದರು.

ಮನೆಯ ಒಡತಿ ಅಮೀನಾ ಮಧ್ಯಾಹ್ನ 12.30 ರ ಸಮಯದಲ್ಲಿ ಮನೆಗೆ ಬೀಗ ಹಾಕಿಕೊಂಡು ಪೇಟೆಗೆ ಹೋಗಿದ್ದರು. ಸಂಜೆ ಮನೆಗೆ ವಾಪಸ್ ಬಂದಾಗ ಗೇಟ್‌ಗೆ ಹಾಕಿದ್ದ ಬೀಗ ಹಾಗೇ ಇತ್ತು.

ಒಳ ಪ್ರವೇಶಿಸಿದಾಗ ಮುಂಬಾಗಿಲ ಬೀಗವನ್ನು ಒಡೆದು ಹಾಕಿರುವುದು ಕಂಡುಬಂದಿತ್ತು. ಮನೆಯ ಒಳಗಿದ್ದ ಸುಮಾರು 54 ಗ್ರಾಂ ತೂಕದ ನಕ್ಲೇಸ್, ಲಾಂಗ್ ಚೈನ್, ಜುಂಕಿ, ಕಿವಿ ಓಲೆ ಬಂಗಾರದ ಒಡವೆಗಳು ಮತ್ತು ಸುಮಾರು 80 ಗ್ರಾಮ ತೂಕದ ಬೆಳ್ಳಿಯ ಒಡವೆ ವಸ್ತುಗಳು ಹಾಗೂ ೮೦ ಸಾವಿರ ನಗದು ದೋಚಿರುವ ಪ್ರಕರಣ ಬಯಲಾಗಿದೆ.

ನ್ಯೂಟೌನ್ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಲಾಗಿ ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಶೈಲಕುಮಾರ್ ಮತ್ತು ಸಬ್‌ಇನ್ಸ್‌ಪೆಕ್ಟರ್ ರಮೇಶ್ ಮತ್ತು ಸಿಬ್ಬಂದಿಗಳು ಪರಿಶೀಲನೆ ನಡೆಸಿ ಸ್ವಾನದಳವನ್ನು ಸ್ಥಳಕ್ಕೆ ಕರೆಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಠಾಣಾಧಿಕಾರಿ ರಮೇಶ್ ಪ್ರಕರಣ ಬೇಧಿಸಲು ಬಲೆ ಬೀಸಿದ್ದಾರೆ. 

Share This Article
";