ಶಿವಮೊಗ್ಗ, ಜೂ.11 : ಧರ್ಮಸ್ಥಳ ಸಂಘದ ಸಾಲದ ವಿಚಾರವಾಗಿ ಜಗಳವಾಗಿ ಪತಿಯೇ ಪತ್ನಿಯ ಮೂಗನ್ನು ಕಚ್ಚಿ ತುಂಡರಿಸಿದ ಘಟನೆ ಚನ್ನಗಿರಿ ತಾಲೂಕಿನ ಮಂಟರಘಟ್ಟ ಗ್ರಾಮದಲ್ಲಿ ಘಟನೆ ಸಂಭವಿಸಿದೆ.
ತುಂಡಾದ ಮೂಗಿನೊಂದಿಗೆ ಪತ್ನಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಾಗಿದ್ದಾಳೆ.
ವಿಜಯ್ ಮತ್ತು ವಿದ್ಯಾ ದಂಪತಿ ಧರ್ಮಸ್ಥಳ ಸ್ವಸಹಾಯ ಸಂಘದಿಂದ 2 ಲಕ್ಷ ರೂ. ಸಾಲ ಪಡೆದಿದ್ದರು. ಇಬ್ಬರು ಸೇರಿ ಕಂತು ಕಟ್ಟುತ್ತಿದ್ದರು. ಕಳೆದ ಎರಡು ವಾರ ಹಣವಿಲ್ಲದ್ದರಿಂದ ವಿದ್ಯಾ ಸಾಲದ ಕಂತು ಪಾವತಿಸಿರಲಿಲ್ಲ. ಸಂಘದವರು ಪತಿ ವಿಜಯ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಈ ವಿಚಾರವಾಗಿ ದಂಪತಿ ಮಧ್ಯೆ ಜಗಳವಾಗಿತ್ತು.
ಹೆಂಡತಿಯ ಮೂಗನ್ನೇ ಕಚ್ಚಿದ ಗಂಡ:
ಜಗಳದ ಸಂದರ್ಭ ವಿದ್ಯಾಳ ಮೂಗನ್ನೇ ಪತಿ ವಿಜಯ್ ಕಚ್ಚಿ ತುಂಡರಿಸಿದ್ದಾನೆ. ಸ್ಥಳೀಯರು ಗಲಾಟೆ ಬಿಡಿಸಿದ್ದಾರೆ. ತುಂಡಾದ ಮೂಗಿನೊಂದಿಗೆ ವಿದ್ಯಾ ಚನ್ನಗಿರಿಯ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದರು. ಪ್ರಾಥಮಿಕ ಚಿಕಿತ್ಸೆ ಬಳಿಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿತ್ತು. ನಂತರ ಮೂಗು ಜೋಡಿಸುವ ಶಸ್ತ್ರಚಿಕಿತ್ಸೆಗಾಗಿ ಸರ್ಜಿ ಆಸ್ಪತ್ರೆಗೆ ವಿದ್ಯಾಳನ್ನು ರವಾನಿಸಲಾಗಿದೆ.
ಈ ಹಿನ್ನೆಲೆ ಶಿವಮೊಗ್ಗದ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಪ್ರಕರಣವನ್ನು ಚನ್ನಗಿರಿ ಠಾಣೆಗೆ ವರ್ಗಾಯಿಸಲಾಗಿದೆ.