ಶಿವಮೊಗ್ಗ, ಆ.12 : ಜಿಲ್ಲೆಯ ಯಾವುದೇ ಸಂಘಟನಾತ್ಮಕ ಚಳವಳಿಗಳಲ್ಲಿ ಡಿಎಸ್‌ಎಸ್ ರಾಜ್ಯ ಸಂಚಾಲಕ ಎಂ ಗುರುಮೂರ್ತಿಯವರ ಪಾಲಿದೆ. ವಿವಿಧ ಸಂಘಟನೆಗಳ ಮತ್ತು ತುಳಿತಕ್ಕೊಳಗಾದ ಜನರ ಭಾವನಾತ್ಮಕ ಮತ್ತು ನಿರಂತರವಾದ ಸಂಬಂಧವನ್ನು ಅವರು ಹೊಂದಿದ್ದು ಅವರ ಕಣ್ಣೀರು ಕೆಲಸವನ್ನು ಸದಾ ಮಾಡುತ್ತಿದ್ದಾರೆ ಎಂದು ಸಹ್ಯಾದ್ರಿ ವಾಣಿಜ್ಯ ನಿರ್ವಹಣಾ ಕಾಲೇಜಿನ ಪ್ರಾಚಾರ್ಯ ಪ್ರೊ. ಟಿ ಅವಿನಾಶ್ ಹೇಳಿದರು.
ಅವರು ಮಂಗಳವಾರ ಎಂ. ಗುರುಮೂರ್ತಿ ಅವರ ಅಭಿಮಾನಿ ವೃಂದದವರು ಏರ್ಪಡಿಸಿದ್ದ ಗುರುಮೂರ್ತಿ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗುರುಮೂರ್ತಿ ಅವರಿಗೆ ಸಮಾಜದ ಬಗ್ಗೆ ಕಾಳಜಿ, ಪ್ರೀತಿ ಇದೆ. ಹೋರಾಟದ ಅನುಭವದ ಜ್ಞಾನವಿದೆ. ಸಮಾಜಕ್ಕೆ ಸರಿಯಾದ ಮಾರ್ಗದರ್ಶನ ಕೊಡುತ್ತಿದ್ದಾರೆ. ಡಿಎಸ್‌ಎಸ್ ಸಂಸ್ಥಾಪಕ ಪ್ರೊ. ಟಿ ಕೃಷ್ಣಪ್ಪ ಅವರ ಹಾದಿಯಲ್ಲಿ ಬೆಳೆದು ಬಂದು ಅವರ ಮಾರ್ಗದರ್ಶನದಂತೆಯೇ ಇಂದಿಗೂ ಸಹ ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡು ಸಾವಿರಾರು ಜನರಿಗೆ ನೆರವಾಗಿದ್ದಾರೆ. ಯಾವುದೇ ಸಮಸ್ಯೆ ಇದ್ದರೂ ಅದನ್ನು ಪರಿಹರಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ ಎಂದರು. ಅಪ್ಪಟ ಮನುಷ್ಯನಾಗಿ ಅವರು ಎಲ್ಲರಿಗೂ ಕಂಡುಬರುತ್ತಿದ್ದಾರೆ. ಸಮಾಜದಲ್ಲಿ ಎಲ್ಲರೊಡನೆಯೂ ಒಡನಾಡುತ್ತ, ಅವಕಾಶ ವಂಚಿತರಲ್ಲಿ ಆತ್ಮವಿಶ್ವಾಸ ಮೂಡಿಸುವ ವಿಶೇಷ ಗುಣ ಅವರಲ್ಲಿದೆ. ಅವರ ಸಾಮಾಜಿಕ ವ್ಯಕ್ತಿತ್ವದಿಂದಲೇ ಅವರು ಜನಪ್ರಿಯರಾಗಿದ್ದಾರೆ.
ಕೌಟುಂಬಿಕವಾಗಿ ಹಾಗೂ ಸಾರ್ವಜನಿಕವಾಗಿ ಹಲವರ ಜೊತೆ ಅವರಿಗೆ ಆತ್ಮೀಯ ಸಂಬಂಧವಿದೆ. ಪ್ರಗತಿಪರ ಚಳವಳಿಯನ್ನು ಜಿಲ್ಲೆಯಲ್ಲಿ ಕಟ್ಟಿರುವವರಲ್ಲಿ ಅವರು ಪ್ರಮುಖರು ಎಂದು ಹೇಳಿದರು. ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಜಾಗದಲ್ಲಿ ಕೇಂದ್ರ ಸರ್ಕಾರವು ಜಾರಿಗೊಳಿಸಲಿದ್ದ ದೊಡ್ಡ ಯೋಜನೆಯನ್ನು ಅವರು ಹೋರಾಟಗಾರರ ಜೊತೆ ಸೇರಿ ಪ್ರಬಲವಾಗಿ ವಿರೋಧಿಸಿ ಪ್ರತಿಭಟಿಸುವ ಮೂಲಕ ಸಹ್ಯಾದ್ರಿ ಕಾಲೇಜಿನ ಜಾಗ ಉಳಿಯುವಂತೆ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಖಚಿತ ನಿಲುವಿನ ವ್ಯಕ್ತಿತ್ವವೇ ಅವರನ್ನು ಇನ್ನಷ್ಟು ಹೊಳಪಿನ ವ್ಯಕ್ತಿಯನ್ನಾಗಿ ಮಾಡಿದೆ ಎಂದರು.
ಅಧ್ಯಕ್ಷತೆಯನ್ನು ಎಂ ಗುರುಮೂರ್ತಿ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಬೃಹತ್ ಕೇಕನ್ನು ಕತ್ತರಿಸಲಾಯಿತು ಗುರುಮೂರ್ತಿ ಅಭಿಮಾನಿಗಳು ರಾಜ್ಯದ ಹಲವೆಡೆಯಿಂದ ಆಗಮಿಸಿ ಶಾಲು ಹೊದಿಸಿ ಸನ್ಮಾನಿಸಿ ಶುಭ ಹಾರೈಸಿದರು.
ಕೃಷ್ಣಪ್ಪ ಅವರು ದಲಿತರ ಮನೆಯಲ್ಲಿ ಹಚ್ಚಿದ ಹಣತೆ ಆರದಂತೆ ನೋಡಿಕೊಳ್ಳಿ ಎಂದು ಹೇಳಿದ್ದರು ಗುರುಮೂರ್ತಿ ಇದನ್ನು ಪಾಲಿಸುತ್ತಿದ್ದಾರೆ. ಅವರ ವಾರಸುದಾರರು ಎಂ ಗುರುಮೂರ್ತಿಯವರು ಲಕ್ಷಾಂತರ ಡಿಎಸ್‌ಎಸ್ ಕಾರ್ಯಕರ್ತರನ್ನು ರಾಜ್ಯದಾದ್ಯಂತ ಹುಟ್ಟುಹಾಕಿದ್ದಾರೆ ಸಂವಿಧಾನ ಮರ್ದಿಸುವ ಕೆಲಸ ಇಂದು ನಡೆಯುತ್ತಿರುವುದರಿಂದ ಅದನ್ನು ರಕ್ಷಿಸುವ ಹೋರಾಟದಲ್ಲೂ ತೊಡಗಿಸಿಕೊಂಡಿದ್ದಾರೆ ಡಿಎಸ್ ಎಸ್ ಪ್ರಬಲವಾಗಿ ಬೆಳೆಯುವಂತೆ ಮಡಿದ್ದಾರೆ. ಅವರಲ್ಲಿ ಪ್ರಬಲವಾದ ಶಕ್ತಿ ಇದೆ. ಭರವಸೆ ಮತ್ತು ನೊಂದವರಿಗೆ ನ್ಯಾಯ ಕೊಡುವ ಪ್ರಮುಖವಾದ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಬೆಂಕಿಗೂ ಕರಗದ ವ್ಯಕ್ತಿತ್ವ ಅವರದು.
– ಪ್ರೊ. ಬಿ ಎಲ್ ರಾಜು