ನನಗೆ ಸ್ವಲ್ಪ ವಿಷ ಕೊಡಿ: ನಟ ದರ್ಶನ್

Kranti Deepa
ಬೆಂಗಳೂರು, ಸೆ.09 : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ಅವರು ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ನನಗೆ ವಿಷ ನೀಡಿ, ವಿಷ ನೀಡಲು ಆದೇಶಿಸಿ ಎಂದು ಅಳಲು ತೋಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ನಟ ದರ್ಶನ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು ಬೆಡ್ ಶೀಟ್ ತಲೆದಿಂಬು ನೀಡಲು ಆದೇಶಿಸುವಂತೆ ಕೋರಿ  ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ದರ್ಶನ್ ಅರ್ಜಿ ಸಲ್ಲಿಸಿದ್ದಾರೆ.  ಈ ಅರ್ಜಿ ವಿಚಾರಣೆ ವೇಳೆ ವಿಡಿಯೋ ಕಾಲ್​ ಮೂಲಕ ದರ್ಶನ್ ವಿಚಾರಣೆಗೆ ಹಾಜರಾಗಿದ್ದು,  ಈ ಸಮಯದಲ್ಲಿ ಮೊದಲಿಗೆ ಕೈ ಎತ್ತಿ ‘ಒಂದು ಮನವಿ ಇದೆ’ ಎಂದು ಹೇಳಿದ್ದಾರೆ. ಮನವಿ ಏನು ಎಂದು ಕೇಳಿದಾಗ, ನಟ ದರ್ಶನ್  ‘ನಾನು ಬಿಸಿಲು ನೋಡಿ 30 ದಿನಗಳಾಗಿವೆ. ಏನೇ ಕೇಳಿದರೂ ಕೋರ್ಟ್ ನಿಂದ ಆದೇಶ ತನ್ನಿ ಎನ್ನುತ್ತಾರೆ.
ಕೈ ಎಲ್ಲಾ ಫಂಗಸ್ ಬಂದಿದೆ. ಬೇರೆ ಯಾರಿಗೂ ಬೇಡ ನನಗೆ ಮಾತ್ರ ಪಾಯಿಸನ್ ನೀಡಲಿ. ಕೋರ್ಟ್​​ನಿಂದಲೇ ಈ ಆದೇಶ ನೀಡಬೇಕು’ ಎಂದು ದರ್ಶನ್ ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.ಆಗ ಜಡ್ಜ್  ‘ಹಾಗೆಲ್ಲಾ ನೀವು ಕೇಳುವಂತಿಲ್ಲ ಜೈಲು ಅಧಿಕಾರಿಗಳಿಗೆ ಯಾವ ಆದೇಶ ನೀಡಬೇಕೋ ನೀಡುತ್ತೇವೆ. ನಿಮ್ಮ ಮನವಿ ಬಗ್ಗೆ ಮಧ್ಯಾಹ್ನ ಆದೇಶ ನೀಡುತ್ತೇವೆ’ ಎಂದು ನ್ಯಾಯಾಧೀಶರು ವಿಚಾರಣೆಯನ್ನು 3 ಗಂಟೆಗೆ ಮುಂದೂಡಿದ್ದಾರೆ ಎನ್ನಲಾಗಿದೆ.

Share This Article
";