ಸಿಎಂ ಖುರ್ಚಿ ಬಿಡುವ ಮುನ್ನ ಸಿದ್ದರಾಮಯ್ಯರು ಜಾತಿ ಗಣತಿ ವರದಿ ಬಿಡುಗಡೆ ಮಾಡಬೇಕು: ಜಿ. ಬಿ. ವಿನಯ್ ಕುಮಾರ್

Kranti Deepa

ದಾವಣಗೆರೆ,ಅ.18: ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೇ ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷರಾಗಿದ್ದ ಹೆಚ್. ಕಾಂತರಾಜ್ ಅವರ ನೇತೃತ್ವದಲ್ಲಿ ನಡೆದ ಜಾತಿ ಗಣತಿ ವರದಿ ಬಿಡುಗಡೆ ಮಾಡಬೇಕು. ಕೂಡಲೇ ಸಂಪುಟದಲ್ಲಿ ಅನುಮೋದನೆ ಪಡೆದು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು ಎಂದು ಸ್ವಾಭಿಮಾನಿ ಬಳಗದ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಒತ್ತಾಯಿಸಿದರು.

ಪತ್ರಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಯಾವುದೇ ಒತ್ತಡಕ್ಕೆ ಮಣೆ ಹಾಕಬಾರದು. 2015ರಲ್ಲಿ ಶೈಕ್ಷಣಿಕ, ಸಾಮಾಜಿಕ, ಗಣತಿ ಸಮೀಕ್ಷಾ ವರದಿ ಬಿಡುಗಡೆಗೆ ವಿರೋಧ ಇರಲಿಲ್ಲ. ಆದ್ರೆ, 2024ರಲ್ಲಿ ಯಾಕೆ ವಿರೋಧ ಮಾಡಲಾಗುತ್ತಿದೆ. ಸಿಎಂ ಸಿದ್ದರಾಮಯ್ಯರು ಮುಡಾ ಪ್ರಕರಣದಲ್ಲಿ ಸ್ವಲ್ಪ ಮಟ್ಟಿಗೆ ಹಿನ್ನೆಡೆ ಅನುಭವಿಸಿದ್ದರೂ, ಸಿಎಂ ಖುರ್ಚಿ ಬಿಡುವ ಮುನ್ನ ವರದಿ ಜಾರಿಗೊಳಿಸಬೇಕು.  ಇಂಥ ನಿರ್ಧಾರ ತೆಗೆದುಕೊಳ್ಳಲು ಸಿದ್ದರಾಮಯ್ಯ ಅವರೊಬ್ಬರಿಂದ ಮಾತ್ರ ಸಾಧ್ಯ. ರಾಜ್ಯದಲ್ಲಿ 5 ಕೋಟಿ ಅಹಿಂದ ವರ್ಗದ ಜನರಿದ್ದು, ಅವರ ಆಶೋತ್ತರಗಳಿಗೆ ತಕ್ಕಂತೆ ನಿರ್ಧರಿಸಲಿ ಎಂದು ಹೇಳಿದರು.

ಹೆಚ್. ಕಾಂತರಾಜ ಅವರ ನೇತೃತ್ವದಲ್ಲಿ 11 ರಿದ 30 ದಿನಗಳ ಕಾಲ ಮನೆ, ಮನೆಗೆ ತೆರಳಿ ರಾಜ್ಯದ 1351 ಜಾತಿಗಳ ಪಟ್ಟಿಯನ್ನು ಸಿದ್ಧಪಡಿಸಿ ಗಣತಿ ಮಾಡಲಾಗಿತ್ತು. ಗಣತಿ ಪೂರ್ಣಗೊಂಡು 9 ವರ್ಷಗಳಾದರೂ ಸಾರ್ವಜನಿಕವಾಗಿ ಬಿಡುಗಡೆಗೊಳಿಸಿಲ್ಲ. ರಾಜ್ಯದಲ್ಲಿರುವ ಎಲ್ಲಾ ವರ್ಗಗಳ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳನ್ನು ತಿಳಿದುಕೊಂಡು ಅವಕಾಶ ವಂಚಿತರಿಗೆ ಅನುಕೂಲನಗಳು ಹಾಗೂ ಅವಕಾಶ ಮಾಡಿಕೊಡಲು ಗಣತಿಯ ಅಂಕಿ ಅಂಶಗಳು ಸರ್ಕಾರಕ್ಕೆ ಮಾರ್ಗಸೂಚಿಯಾಗಲಿದೆ ಎಂದು ವಿಶ್ಲೇಷಿಸಿದರು.

2015ರಲ್ಲಿ ಸಾರ್ವಜನಿಕ ಪ್ರಕಟಣೆ ಹೊರಡಿಸಿ, ರಾಜ್ಯದ ಪ್ರತಿಯೊಂದು ಜಾತಿಗಳಿಗೂ ಪ್ರತ್ಯೇಕ ಒಂದೊಂದು ಸಂಖ್ಯೆಯನ್ನು ನೀಡಿ ಮನೆ, ಮನೆ ಸಮೀಕ್ಷೆಯನ್ನು ವಿದ್ಯಾವಂತ, ಶಿಕ್ಷಕರ ಸಹಕಾರದಿಂದ ನಡೆಸಲಾಗಿದೆ. 2024ರಲ್ಲಿಗಣತಿ ಬಿಡುಗಡೆಗೆ ವಿರೋಧ ವ್ಯಕ್ತಪಡಿಸುತ್ತಿರುವವರು ಗಣತಿಯ ಆರಂಭದಲ್ಲಿ ಅಥವಾ ಗಣತಿ ಕಾರ್ಯ ಮುಗಿದ ಬಳಿಕ ಅನುಮಾನಗಳಿದ್ದರೆ ಆಗಲೇ ವಿರೋಧಿಸಬಹುದಿತ್ತು. 9 ವರ್ಷಗಳ ಕಾಲ ಸುಮ್ಮನಿದ್ದು, ಈಗ ಅವೈಜ್ಞಾನಿಕ ಸಮೀಕ್ಷೆಯಾಗಿದೆ. ಇದನ್ನು ರದ್ದುಗೊಳಿಸಿ, ಹೊಸದಾಗಿ ಮತ್ತೊಮ್ಮೆ ನಡೆಸಿ ಎಂಬ ಸಲಹೆಯನ್ನು ಅವರವರಿಗೆ ತೋಚಿದಂತೆ ಹೇಳಿಕೆಗಳನ್ನು ನೀಡುತ್ತಿರುವುದು ಹಾಸ್ಯಾಸ್ಪದ. ಅವರ ವಾದಗಳಲ್ಲಿ ಸಾರ್ವಜನಿಕರ 165 ಕೋಟಿ ರೂಪಾಯಿ ಹಣವು ವ್ಯರ್ಥವಾದರೂ ಪರವಾಗಿಲ್ಲ ಎನ್ನುವಂತಿದೆ ಎಂದು ಕಿಡಿಕಾರಿದರು.

ಸಾಮಾಜಿಕ, ಶೈಕ್ಷಣಿಕ ಗಣತಿ ವರದಿಯನ್ನು 224 ವಿಧಾನಸಭಾ ಕ್ಷೇತ್ರದಲ್ಲಿರುವ ಶೇಕಡಾ 80ರಷ್ಟಿರುವ ಶೋಷಿತ ವರ್ಗಗಳು ಸ್ವಾಗತಿಸಿ, ಕೂಡಲೇ ಸಾರ್ವಜನಿಕವಾಗಿ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸುತ್ತಿದ್ದು, ಶೇಕಡಾ 15ರಷ್ಟು ಮಂದಿಮಾತ್ರ ವಿರೋಧ ಮಾಡುತ್ತಿದ್ದಾರೆ. ಶೇಕಡಾ 5ರಷ್ಟು ಜನರು ತಟಸ್ಥರಾಗಿದ್ದಾರೆ. ಬಹುಜನರ ಮನವಿಯನ್ನು ರಾಜ್ಯ ಸರ್ಕಾರ ಪುರಸ್ಕರಿಸಿ ಈಗಾಗಲೇ ಸುದೀರ್ಘ 9 ವರ್ಷಗಳು ವ್ಯರ್ಥವಾಗಿದೆ. ಯಾರ ಒತ್ತಡಕ್ಕೂ ಮಣಿಯದೇ ನುಡಿದಂತೆನಡೆಯುತ್ತೇವೆಂಬ ಘೋಷವಾಕ್ಯಗಳನ್ನು ಸಾರ್ವಜನಿಕವಾಗಿ ಹೇಳುವಂತೆ ಈ ವರದಿಯನ್ನು ಸಂಪುಟದಲ್ಲಿ ಅನುಮೋದಿಸಿ ರಾಜ್ಯದ ಜನರಿಗೆ ವರದಿಯಲ್ಲಿರುವ ಅಂಶಗಳನ್ನು ಬಹಿರಂಗವಾಗಿ ತಿಳಿಯಪಡಿಸಬೇಕು ಎಂದು ಜಿ. ಬಿ. ವಿನಯ್ ಕುಮಾರ್ ಆಗ್ರಹಿಸಿದರು.

ಗೋಷ್ಠಿಯಲ್ಲಿ ಸ್ವಾಭಿಮಾನಿ ಬಳಗದ ಶಿವಕುಮಾರ್, ಜಿ. ಷಣ್ಮುಖಪ್ಪ ಮತ್ತಿತರರು ಹಾಜರಿದ್ದರು.

Share This Article
";