ಗಾಡಿಕೊಪ್ಪ: ಚರಂಡಿಗಳಲ್ಲಿ ಕಸಕಡ್ಡಿ, ದುರ್ನಾತ

Kranti Deepa
ಶಿವಮೊಗ್ಗ  , ಏ. 01 : ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ 1 ನೇ ವಾರ್ಡ್ ಗಾಡಿಕೊಪ್ಪದ ಹಲವೆಡೆ ಚರಂಡಿಗಳಲ್ಲಿ ಕಸಕಡ್ಡಿ ತುಂಬಿಕೊಂಡು, ಕೊಳಚೆ ನೀರು ಸರಾಗವಾಗಿ ಹರಿಯುತ್ತಿಲ್ಲ. ದುರ್ನಾತ ಬೀರುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಮಾಹಿತಿ ನೀಡಿದ್ದಾರೆ.
ಗಾಡಿಕೊಪ್ಪದ ಪುರದಾಳು ರಸ್ತೆ, ಬಸವೇಶ್ವರ ರಸ್ತೆ, ಮೈಸೂರು ಬೀದಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಚರಂಡಿ ಸ್ವಚ್ಛಗೊಳಿಸಿ ಹಲವು ತಿಂಗಳುಗಳೇ ಆಗಿದೆ. ಇದರಿಂದ ಚರಂಡಿಗಳಲ್ಲಿ ಭಾರೀ ಪ್ರಮಾಣದ ಕಸಕಡ್ಡಿ ತುಂಬಿಕೊಂಡಿದೆ. ಕೊಳಚೆ ನೀರು ಸರಾಗವಾಗಿ ಹರಿದು ಹೋಗದಿರುವುದರಿಂದ, ದುರ್ನಾತ ಬೀರುತ್ತಿದೆ.
ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿಯಿದೆ. ಮತ್ತೊಂದೆಡೆ ಬೇಸಿಗೆ ಸಮಯವಾಗಿರುವುದರಿಂದ ಸೊಳ್ಳೆ, ನೊಣ ಸೇರಿದಂತೆ ಮತ್ತೀತರ ಕ್ರಿಮಿಕೀಟಗಳ ಹಾವಳಿಯೂ ವಿಪರೀತವಾಗಿದೆ ಎಂದು  ಅಳಲು ತೋಡಿಕೊಂಡಿದ್ದಾರೆ.
ಚರಂಡಿಗೆ ಸ್ವಚ್ಛತೆಗೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರೂ ಇಲ್ಲಿಯವರೆಗೂ ಪಾಲಿಕೆ ಆಡಳಿತ ಇತ್ತ ಚಿತ್ತ ಹರಿಸಿಲ್ಲ. ನಮ್ಮಗಳ ಗೋಳು ಆಲಿಸುವವರೇ ಯಾರೂ ಇಲ್ಲದಂತಾಗಿದೆ. ತಕ್ಷಣವೇ ಪಾಲಿಕೆ ಆಡಳಿತ ಗಾಡಿಕೊಪ್ಪ ಭಾಗದಲ್ಲಿ ಚರಂಡಿ ಸ್ವಚ್ಛತೆಗೆ ಅಗತ್ಯ ಕ್ರಮಕೈಗೊಳ್ಳಬೇಕು.
ಈ ಮೂಲಕ ನಾಗರೀಕರಿಗೆ ಆಗುತ್ತಿರುವ ತೊಂದರೆ ಸರಿಪಡಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ನಡೆಸುವುದು ಅನಿರ್ವಾಯವಾಗಲಿದೆ ಎಂದು  ಎಚ್ಚರಿಸಿದ್ದ್ದಾರೆ.

Share This Article
";