ಹೊಳೆಹೊನ್ನೂರು, ಸೆ. 03 : ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಭದ್ರಾ ಚಾನಲ್ನಲ್ಲಿ ದುರ್ಘಟನೆಯೊಂದು ಸಂಭವಿಸಿದೆ. ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಚಾನಲ್ನಲ್ಲಿ ಮುಳುಗಿ 10 ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ. ಹೊಳೆಹೊನ್ನೂರು ಸಮೀಪದ ಕುರುಬರ ವಿಠಲಾಪುರದಲ್ಲಿ ಈ ಘಟನೆ ಸಂಭವಿಸಿದ್ದು ಮೃತ ಬಾಲಕನನ್ನು ಇಟ್ಟಿಗೆಹಳ್ಳಿಯ ಕುಶಾಲ್ ಎಂದು ಗುರುತಿಸಲಾಗಿದೆ.
ಕುರುಬರ ವಿಠಲಾಪುರದ ಮಕ್ಕಳು ಮಣ್ಣಿನ ಗಣಪತಿಯನ್ನು ತಯಾರಿಸಿದ್ದರು. ಅದನ್ನು ಖುದ್ದು ತಾವೇ ಸೇರಿಕೊಂಡು ನೀರಿಗೆ ಬಿಡಲು ಮುಂದಾಗಿದ್ದರು. ಈ ವಿಷಯವನ್ನು ಪೋಷಕರಿಗೂ ಸಹ ತಿಳಿಸಿರಲಿಲ್ಲ. ಗಣಪತಿ ಮೂರ್ತಿಯನ್ನು ವಿಸರ್ಜಿಸಲು ಭದ್ರಾ ನಾಲೆಗೆ ಇಳಿದಿದ್ದ ಸಂದರ್ಭದಲ್ಲಿ ಕುಶಾಲ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಘಟನೆ ಬೆನ್ನಲ್ಲೆ ಸ್ಥಳೀಯರು ನೀರಿಗಿಳಿದು ಬಾಲಕನಿಗಾಗಿ ಹುಡುಕಾಡಿದ್ದಾರೆ. ಕೆಲಹೊತ್ತಿನ ಹುಡುಕಾಟದ ಬಳಿಕ ಬಾಲಕನ ಶವ ಪತ್ತೆಯಾಗಿದೆ. ಇನ್ನೂ ಘಟನೆ ಸಂಬಂಧ ಹೊಳೆಹೊನ್ನೂರು ಠಾಣೆಯ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.