ಜೂಜು, ಓಸಿ, ಗಾಂಜಾ ನಿಲ್ಲಿಸಿ : ಎಸ್‌ಪಿಗೆ ಮನವಿ

Kranti Deepa
ಶಿವಮೊಗ್ಗ,ಮಾ.28 : ಭದ್ರಾವತಿ ತಾಲೂಕು ಹೊಳೆಹೊನ್ನೂರು ಹಾಗೂ ಆನವೇರಿ ವ್ಯಾಪ್ತಿಯಲ್ಲಿ  ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಅಕ್ರಮ ದಂಧೆಗಳಾದ ಜೂಜೂ, ಗಾಂಜಾ ಮಾರಾಟ, ಓಸಿ, ಐಪಿಎಲ್ ಬೆಟ್ಟಿಂಗ್ ಹಾಗೂ ಅಕ್ರಮ ಮರಳು ಸಾಗಣೆ ನಡೆಯುತ್ತಿದ್ದು. ಈ ಬಗ್ಗೆ   ಕ್ರಮ ಕೈಗೊಳ್ಳಬೇಕೆಂದು ಶಾಸಕರಾದ ಡಾ.ಧನಂಜಯ ಸರ್ಜಿ ಮತ್ತು ಶಿವಮೊಗ್ಗ ಶಾರದಾ ಪೂರ್ಯ ನಾಯ್ಕ್  ನೇತೃತ್ವವದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಡಾ.ಧನಂಜಯ ಸರ್ಜಿ ಭದ್ರಾವತಿ, ಹೊಳೆಹೊನ್ನೂರು ಮತ್ತು  ಆನವೇರಿ ಭಾಗಗಳಲ್ಲಿ ಜೂಜು, ಗಾಂಜಾ ಮಾರಾಟ, ಓ.ಸಿ ದಂಧೆಗಳು ಎಗ್ಗಿಲ್ಲದೆ ನಡೆಯುತ್ತಿದೆ ಎಂಬ ದೂರುಗಳು ಬಹಳ ದಿನಗಳಿಂದ ಕೇಳಿ ಬರುತ್ತಿದೆ. ಇತ್ತೀಚಿಗೆ ಓ.ಸಿ, ಇಸ್ಪೀಟ್ ಅಲ್ಲದೆ ಆನ್ಲೈನ್ ಜೂಜುಗಳು ಕೂಡ ಹೆಚ್ಚಾಗಿದ್ದು ಯುವಕರು ಇದರ ಚಟಕ್ಕೆ ಬಿದ್ದು ಲಕ್ಷಾಂತರ ರೂಪಾಯಿಗಳನ್ನೂ ಕಳೆದುಕೊಂಡು ಸಾಕಷ್ಟು ಜನ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ಕೂಡ ಕೇಳಿ ಬಂದಿವೆ.
ಇಸ್ಪೀಟ್ ಅಡ್ಡೆಗಳ ಮೇಲೆ ಪೊಲೀಸರು ದಾಳಿ ಮಾಡುವ ಸಂದರ್ಭದಲ್ಲೂ 200 ರಿಂದ 300 ದಂಡ ಕಟ್ಟಿಸಿಕೊಂಡು ಬಿಡುತ್ತಾರೆ ಹಾಗಾಗಿ ಎಸ್.ಪಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಕಠಿಣ ಕ್ರಮವನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದ್ದೇವೆ ಎಸ್.ಪಿ ಅವರು ಕೂಡ ತಡೆಗಟ್ಟಲು ಕ್ರಮ ತೆಗೆದುಕೊಳ್ಳುವುದಾಗಿ ಹಾಗೂ  ಕಿಂಗ್‌ಪಿನ್‌ಗಳನ್ನೂ ಮೊದಲು ಹಿಡಿದು ಗಡಿಪಾರು ಮಾಡಲಾಗುವುದು ಎಂಬ ಭರವಸೆಯನ್ನ ನೀಡಿದ್ದಾರೆ ಎಂದರು.
ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾಪೂರ್ಯ ನಾಯ್ಕ್ ಮಾತನಾಡಿ, ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಹೊಳೆಹೊನ್ನುರು ಹಾಗು ಆನವೇರಿ ಸುತ್ತಮುತ್ತ ಸಾಕಷ್ಟು  ಆಕ್ರಮ ಚಟುವಟಿಕೆಗಳು ನಡೆಯುತ್ತಿದ್ದು ಈ ಬಗ್ಗೆ ಗಮನ ಹರಿಸಬೇಕೆಂದು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಮಾಡಿದ್ದು. ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.

Share This Article
";