ಎಟಿಎಂನಿಂದ ಹಣ ಬಿಡಿಸಿಕೊಟ್ಟು ಇಬ್ಬರಿಗೆ ವಂಚನೆ

Kranti Deepa
ಶಿವಮೊಗ್ಗ,ಫೆ.08 : ಎಟಿಎಂನಿಂದ ಹಣ ಬಿಡಿಸಲು ಬರುವವರಿಗೆ ಅಪರಿಚಿತರು ಸಹಾಯ ಮಾಡುವವರಂತೆ ನಟಿಸಿ ಅವರ ಎಟಿಎಂ ಕಾರ್ಡ್ ಅದಲು ಬದಲು ಮಾಡಿ,  ಬಳಿಕ ಹಣ ತೆಗೆದು ವಂಚಿಸಿದ  ಎರಡು ಘಟನೆ ಸಂಭವಿಸಿದೆ.
ನಿವೃತ್ತ ಉದ್ಯೋಗಿ ಬಾಲಯ್ಯ ಅವರು ಕಾರ್ಗಲ್‌ನ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಹಣ ಬಿಡಿಸಲು ತೆರಳಿದ್ದರು. ಹಣ ಬಿಡಿಸಲು ನೆರವು ನೀಡು ವುದಾಗಿ ಇಬ್ಬರು ಅಪರಿಚಿತರು ಧಾವಿಸಿದ್ದರು. ಬಾಲಯ್ಯ 10 ಸಾವಿರ ರೂ. ಹಣ ಬಿಡಿಸಿ ಕೊಂಡು, ಅಪರಿಚಿತರಿಂದ ಎಟಿಎಂ ಕಾರ್ಡ್ ಹಿಂಪಡೆದಿದ್ದರು.
ಆ ಬಳಿಕ ಬಾಲಯ್ಯ ಅವರ ಖಾತೆಯಿಂದ ಎರಡು ಬಾರಿ ಒಟ್ಟು 1.49  ಲಕ್ಷ ರೂ. ಹಣ ಡ್ರಾ ಆಗಿತ್ತು. ಪರಿಶೀಲಿಸಿದಾಗ ಎಟಿಎಂ ಕಾರ್ಡ್ ಬದಲಾಗಿರುವುದು ಬಾಲಯ್ಯ ಗಮನಕ್ಕೆ ಬಂದಿತ್ತು. ಘಟನೆ ಸಂಬಂಧ ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿರಾಳಕೊಪ್ಪ ವರದಿ:
ಗಾರೆ ಕೆಲಸ ಮಾಡುವ ದಸ್ತಗೀರ್ ಎಂಬುವವರು ಶಿರಾಳಕೊಪ್ಪದ ಕೆನರಾ ಬ್ಯಾಂಕ್ ಎಟಿಎಂನಲ್ಲಿ 5 ಸಾವಿರ ರೂ. ಹಣ ಬಿಡಿಸಲು ತೆರಳಿದ್ದರು. ಆಗ ಅವರಿಗೆ ಇಬ್ಬರು ಅಪರಿಚಿತರು ಸಹಾಯ ಮಾಡಿದ್ದರು. ಅದೇ ದಿನ ಸಂಜೆ ದಸ್ತಗೀರ್ ಅವರ ಖಾತೆಯಿಂದ 95 ಸಾವಿರ ರೂ. ಹಣ ವಿತ್ ಡ್ರಾ ಆಗಿರುವುದು ಗೊತ್ತಾಗಿದೆ.ಪರಿಶೀಲಿಸಿದಾಗ ದಸ್ತಗೀರ್ ಅವರ ಎಟಿಎಂ ಕಾರ್ಡ್ ಬದಲಾಗಿತ್ತು. ಘಟನೆ ಸಂಬಂಧ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
";