ಶಿಕಾರಿಪುರ ಅ 26 : ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ಮುಖ್ಮಮಂತ್ರಿಯಾಗಿದ್ದಾಗ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ ಜೊತೆಗೆ ಪರಂಪರೆಗೆ ಹೆಚ್ಚು ಒತ್ತುನೀಡಿದ್ದರ ಫಲವಾಗಿ ಅವರನ್ನು ಕನ್ನಡದ ಮುಖ್ಮಮಂತ್ರಿ ಎಂದು ಕರೆಯಲಾಗುತ್ತಿತ್ತು ಎಂದು ಜಿಲ್ಲೆಯ ಸಂಸದ ಬಿ ವೈ ರಾಘವೇಂದ್ರರವರು ತಿಳಿಸಿದರು.
ಮಂಡ್ಯ ನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ರಾಜ್ಯದೆಲ್ಲೆಡೆ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥ ಶನಿವಾರ ತಾಲ್ಲೂಕಿಗೆ ಆಗಮಿಸಿದ್ದು ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಕನ್ನಡ ಜ್ಯೋತಿ ರಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಮಗೆ ಉಸಿರು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾದದ್ದು ನಮ್ಮ ಕನ್ನಡ ಭಾಷೆ, ನೆಲ, ಜಲ ಹಾಗೂ ಇಲ್ಲಿನ ಸಂಸ್ಕೃತಿಯಾಗಿದ್ದು ಇದನ್ನು ಎಲ್ಲರೂ ಒಟ್ಟಾಗಿ ಕಾಪಾಡುವ ಸಪಥ ಮಾಡಬೇಕಿದೆ. ಪ್ರತಿ ವರ್ಷವೂ ತಾಲ್ಲೂಕು ಜಿಲ್ಲೆಯ ಹಾಗೂ ರಾಜ್ಯ ಮಟ್ಟದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆಯುವ ಸಮ್ಮೇಳನಕ್ಕೆ ಕೈಚಾಚಿಕೊಂಡು ಹೋಗುವಂಥಾ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಿಎಸ್ವೈರವರು ಮುಖ್ಯಮಂತ್ರಿಯಾದಾಗ ಸಮ್ಮೇಳನದ ಕಾರ್ಯಕ್ರಮಕ್ಕೆ ಪ್ರತಿ ತಾಲ್ಲೂಕು ಮಟ್ಟದ ಸಮ್ಮೇಳನಕ್ಕೆ ಒಂದು ಲಕ್ಷ, ಜಿಲ್ಲಾ ಮಟ್ಟದ ಸಮ್ಮೇಳನಕ್ಕೆ ಐದು ಲಕ್ಷ, ರಾಜ್ಯ ಮಟ್ಟದ ಸಮ್ಮೇಳನಕ್ಕೆ ಒಂದು ಕೋಟಿ ರೂಪಾಯಿ ಸರ್ಕಾರದಿಂದ ಬಿಡುಗಡೆಗೊಳಿಸುವಂತೆ ಬಜೆಟಿನಲ್ಲಿಡಲು ಆದೇಶ ಹೊರಡಿಸಿ ಸಮ್ಮೇಳನವನ್ನು ಅದ್ದೂರಿಯಾಗಿ ನಡೆಸಲು ಕಾರಣೀಭೂತರಾದರು. ಹೀಗೆ ನಮ್ಮ ರಾಜ್ಯದ ನಾಡು, ನುಡಿ, ನೆಲ ಜಲ ಭಾಷೆಗೆ ಹೆಚ್ಚು ಒತ್ತುನೀಡಿದ್ದರ ಫಲವಾಗಿ ಅವರನ್ನು ಕನ್ನಡದ ಮುಖ್ಮಮಂತ್ರಿ ಎಂದು ಕರೆಯಲಾಗುತ್ತಿತ್ತು ಎಂದರು.
ಆಧುನಿಕ ಯುಗದಲ್ಲಿ ಯಾವುದೇ ಭಾಷೆಗಳನ್ನು ಕಲಿಯುವುದು ತಪ್ಪಲ್ಲ. ಆದರೆ ಮಾತನಾಡುವುದನ್ನು ಕಲಿಸಿದ ಕನ್ನಡವನ್ನು ಮರೆತರೆ ಹೆತ್ತ ತಾಯಿಗೆ ದ್ರೋಹಮಾಡಿದಂತೆ. ಅನೇಕ ಶರಣ ಶರಣೆಯರಿಗೆ ಸಾಹಿತಿಗಳಿಗೆ ಜನ್ಮ ನೀಡಿದ ನಮ್ಮ ಭೂಮಿಯ ಭಾಷೆ, ನೆಲ, ಜಲ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ನಮ್ಮೆಲ್ಲರದ್ದಾಗಿದೆ. ಕಸಾಪದ ಜಿಲ್ಲಾಧ್ಯಕ್ಷರಾದ ಮಂಜುನಾಥ್ ರವರು ಅತ್ಯಂತ ಕ್ರಿಯಾಶೀಲರಾಗಿದ್ದು, ಈಗಾಗಲೆ ಸಾಹಿತ್ಯ ಗ್ರಾಮವನ್ನು ಕಟ್ಟಿಸುವಂತಹಾ ಪ್ರಯತ್ನ ನಡೆಸಿದ್ದಾರಲ್ಲದೇ, ತಾಲ್ಲೂಕಿನಲ್ಲಿಯೂ ಕೂಡ ಕಸಾಪದ ತಾಲ್ಲೂಕು ಅದ್ಯಕ್ಷ ರಘು ಹೆಚ್‌ಎಸ್ ಅದ್ಯಕ್ಷತೆಯಲ್ಲಿ ಭವ್ಯವಾದ ಸಾಹಿತ್ಯ ಭವನ ನಿರ್ಮಾಣವಾಗುತ್ತಿದ್ದು, ಇದು ಅತೀ ಶೀಘ್ರದಲ್ಲೇ ಉದ್ಘಾಟನೆಯಾಗಲಿದ್ದು ಈಉದ್ಘಾಟನೆಯನ್ನು ಹಬ್ಬದ ರೀತಿಯಲ್ಲಿ ಆಚರಿಸೋಣ ಎಂಬ ಭರವಸೆ ನೀಡಿದರು.
ಜಿಲ್ಲಾ ಕಸಾಪ ಅದ್ಯಕ್ಷರಾದ ಮಂಜುನಾಥ್ ಮಾತನಾಡಿ, ಜಗತ್ತಿನಲ್ಲಿ 8ಸಾವಿರಕ್ಕೂ ಹೆಚ್ಚು ಭಾಷೆಗಳಿದ್ದು, ಆ ಎಲ್ಲಾ ಭಾಷೆಗಳು ಉಳಿಬೇಕು ಬೆಳಿಸಬೇಕು ಎಂಬ ನಿಟ್ಟಿನಲ್ಲಿ ಯುಎಸ್ಕೋದವರು ಪ್ರತಿವರ್ಷ ಫೆಬ್ರುವರಿ 21ರಂದು ವಿಶ್ವ ಮಾತೃಭಾಷಾ ದಿನಾಚರಣೆಯನ್ನ ಆಚರಿಸಲಾಗುತ್ತಿದೆ. ನಮ್ಮ ನಾಡಿನಲ್ಲಿ 73ಉಪಭಾಷೆಗಳಿದ್ದು, ಆಭಾಷೆಗಳ ಉಳಿವಿಗಾಗಿ ಅದರ ಅದ್ಯಯನಕ್ಕಾಗಿ ಸಮಿತಿಯನ್ನು ರಚಿಸಲಾಗಿದೆ ಎಂದರು.
ಇತ್ತೀಚಿನ ಸಮೀಕ್ಷೆಯ ಪ್ರಕಾರ ನೂರಕ್ಕೆ ನೂರು ಕನ್ನಡ ಭಾಷೆಯನ್ನು ಮಾತನಾಡುವ ಪ್ರದೇಶವೆಂದರೆ ಅದು ಮಂಡ್ಯ ಎಂದು ಹೇಳಲಾಗುತ್ತಿದ್ದು, ಶಿವಮೊಗ್ಗ ಜಿಲ್ಲೆಯು ಕುವೆಂಪು, ಶಿವರುದ್ರಪ್ಪ ಹೀಗೆ ಅನೇಕ ಸಾಹಿತ್ಯ ವಚನಕಾರರ ಬೀಡಾಗಿದ್ದು, ಈ ನೆಲದಲ್ಲಿ ಶೇಕಡಾ 80ರಷ್ಟು ಕನ್ನಡ ಮಾತನಾಡಲಾಗುತ್ತಿದೆ ಎಂದು ಹೇಳಲಾಗುತ್ತಿದ್ದು, ಈವರದಿಯು ನಮಗೆ ಹೆಮ್ಮೆತರುವಂಥದ್ದಲ್ಲ. ಏಕೆಂದರೆ ಜಿಲ್ಲೆಯಲ್ಲಿ ಇನ್ನಷ್ಟು ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಶಾಲಾ ಶಿಕ್ಷಕರಲ್ಲಿ ಪೋಷಕರಲ್ಲಿ ಬಿತ್ತುವ ಅದ್ಯಯನ ನಡೆಸುವ ಕೆಲಸವಾಗಬೇಕಿದೆ ಎಂದು ಹೇಳಿದರು.
ತಾಲ್ಲೂಕು ಕಸಾಪ ಅದ್ಯಕ್ಷ ಹೆಚ್ ಎಸ್ ರಘು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಾಡು ನುಡಿ ನೆಲ ಜಲ ಸಂಸ್ಕೃತಿಯ ಉಳಿವಿಗಾಗಿ ಸಾಹಿತ್ಯ ಸಮ್ಮೇಳನವೂ ಕೂಡ ಒಂದಾಗಿದ್ದು, ಇದಕ್ಕಾಗಿ ತಾಲ್ಲೂಕು ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಹೆಚ್ಚು ಹೆಚ್ಚು ಹೊಸಹೊಸ ಬರಹಗಾರರನ್ನು ಗುರುತಿಸಾಲಾಗುತ್ತಿದೆ. ಕನ್ನಡವನ್ನ ಬೆಳಸಬೇಕಾದರೆ ಕನ್ನಡವನ್ನ ಹೆಚ್ಚು ಹೆಚ್ಚು ಬಳಸಬೇಕು. ನಾವು ಶಾಲಾ ಕಾಲೇಜುಗಳಲ್ಲಿ ಆಂಗ್ಲ ಭಾಷೆ, ಹಿಂದಿ ಭಾಷೆ ಕೇವಲ ಪಠ್ಯ ಪುಸ್ತಕಗಳಲ್ಲಿ ಅದ್ತನಕ್ಕಾಗಿ ಬಳಸಬೇಕೇ ಹೊರತು, ಮನೆಯಲ್ಲಿ ಇನ್ನಿತರೆಡೆಯಲ್ಲಿ ಕನ್ನಡವನ್ನು ಬಳಸುವುದರ ಮೂಲಕ ಕನ್ನಡವನ್ನ ಬೆಳೆಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ನಂತರ ಪಟ್ಟಣದ ವಿವಿಧ ರಾಜ ಬೀದಿಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರಥವನ್ನು ಮೆರವಣಿಗೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪುರಸಭಾ ಅದ್ಯಕ್ಷೆ ಶೈಲಾ ಯೋಗೀಶ್ ಮಡ್ಡಿ, ಉಪಾಧ್ಯಕ್ಷೆ ರೂಪಾ ಮಂಜುನಾಥ್, ಸದಸ್ಯ ಪ್ರಶಾಂತ್ ಜೀನಳ್ಳಿ, ಜಿಲ್ಲಾ ಡಿಸಿಸಿ ಬ್ಯಾಂಕಿನ ಮಾಜಿ ಅದ್ಯಕ್ಷ ಚನ್ನವೀರಪ್ಪ, ಕನ್ನಡ ಯುವಕ ಸಂಘದ ಅದ್ಯಕ್ಷ ನಗರದ ಮಾಲತೇಶ್, ಕನ್ನಡ ಜಾನಪದ ಪರಿಷತ್ತಿನ ತಾಲ್ಲೂಕು ಅದ್ಯಕ್ಷ ಪಾಪಯ್ಯ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಹುಚ್ರಾಯಪ್ಪ, ತಾಲ್ಲೂಕು ಘಟಕದ ಅದ್ಯಕ್ಷ ಬಿ ಎಲ್ ರಾಜು, ಶಿರಸ್ಥೇಧಾರ್ ವಿನಯ್ ಆರಾದ್ಯ, ಪುರಸಭಾ ಮುಖ್ಯಾಧಿಕಾರಿ ಭರತ್, ಪಾಪಯ್ಯ ಸೇರಿದಂತೆ ವಿವಿಧ ಇಲಾಖೆಯ ಆಡಳಿತ ಅಧಿಕಾರಿಗಳು, ವಿವಿಧ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು ಹಾಗೂ ಸಾರ್ವಜನಿಕರು ಹಾಜರಿದ್ದರು.