ಹೊಳೆಹೊನ್ನೂರು, ಜ.16 : ಟೊಮೊಟೊ ನೆಡಲು ಬಳಸುವ ಬಿದಿರಿನ ಕಡ್ಡಿಯನ್ನು ತೆಗೆದುಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ತಡೆದು, ಆತನಿಗೆ ಹೊಡೆದು ಮಾವಿನಕಟ್ಟೆ ಫಾರೆಸ್ಟ್ ಕಚೇರಿಗೆ ತೆಗೆದುಕೊಂಡು ಹೋಗು ಎಂದು ದಬಾಯಿಸಿ, ದರ್ಪ ಮೆರೆದ ಅರಣ್ಯ ಇಲಾಖೆಯ ವಾಹನ ಚಾಲಕನ ವಿರುದ್ಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜ.13 ರಂದು ಬೆಳಗಿನ ಜಾವ 3-30 ಕ್ಕೆ ಅರಬಿಳಚಿ ಕ್ಯಾಂಪ್, ವಾಸಿ ಪಳನಿ ಎಂಬುವರ ಕೆಎ-14 -ಬಿ-4256 ರ 407 ವಾಹನದಲ್ಲಿ ಬಿದಿರು ಸೀಬನ್ನು ತುಂಬಿಕೊಂಡು ಕೂಡ್ಲಿಗೆರೆಯಿಂದ ದಾವಣಗೆರೆಯ ರೈತರಿಗೆ ಕೊಡಲು ಕೈಮರ ಮಾರ್ಗವಾಗಿ ಕ್ರೈಮರ ಸರ್ಕಲ್ ಹತ್ತಿರ ಹೋಗುತ್ತಿರುವಾಗ ಅರಣ್ಯ ಇಲಾಖೆ ಎಂದು ಇರುವ ಬೋರ್ಡ ಇರುವ ಬುಲೋರೊ ಜೀಪೊಂದು ಬಂದು ಅಡ್ಡನಿಂತಿತ್ತು.
ಪಳನಿ ಅವರ ಟ್ರ್ಯಾಕ್ಟರ್ ವಾಹನವನ್ನು ಅಡ್ಡ ಹಾಕಿ ವಾಹನದಲ್ಲಿ ಏನಿದೆ ಎಂದು ತಪಾಸಣೆ ಮಾಡಿದ ವ್ಯಕ್ತಿ ಈ ಬಿದಿರನ್ನು ಮಾವಿನಕಟ್ಟೆ ಫಾರೆಸ್ಟ್ ಆಫಿಸಿಗೆ ತೆಗದುಕೊಂಡು ಹೋಗು ಎಂದು ಗದರಿಸಿದ್ದಾನೆ. ಅದಕ್ಕೆ ಪಳನಿ ಇದು ಟಮೊಟ ಗಿಡಕ್ಕೆ ನೆಡುವ ಬಿದಿರಿನ ಕಡ್ಡಿ ದಾವಣಗೆರೆಗೆ ಸಾಗಿಸುತ್ತಿದ್ದೇನೆ ಎಂದಿದ್ದಾರೆ.
ಅದಕ್ಕೆ ನನಗೆ ಹಿಂದಿರುಗಿ ಮಾತನಾಡುತ್ತೀಯಾ ಎಂದು ಪಳನಿಯವರ ಕೊರಳ ಪಟ್ಟಿ ಹಿಡಿದು ಕಪಾಳಕ್ಕೆ ಹೊಡೆದು ಅವರ ವಾಹನದಲ್ಲಿದ್ದ ಲಾಟಿಯನ್ನು ತೆಗೆದು ಕೊಂಡು ಬಂದು ಮೈಕೈಗೆ ಹೊಡೆದಿರುವುದಾಗಿ ಆರೋಪಿಸಲಾಗಿದೆ. ಜೊತೆಯಲ್ಲಿದ್ದ ಕೃಷ್ಣಮೂರ್ತಿ ಗಲಾಟೆ ಬಿಡಿಸಲು ಮುಂದಾದಾಗ ಅವರಿಗೂ ಸಹ ಹೊಡೆದು ಪಳನಿಯ ಮೊಬೈಲ್ ನ್ನು ಕಸಿದುಕೊಂಡು ಜೀವ ಬೆದರಿಕೆ ಹಾಕಿ ಹೊರಟು ಹೋಗಿದ್ದಾನೆ.
ಈ ಬಗ್ಗೆ ದೂರು ದಾಖಲಾಗಿದೆ.