ಪೊಲೀಸ್ ಬಂದೋಬಸ್ತ್ ನಡುವೆ ಬೇಲಿ ತೆರವು

Kranti Deepa

ಶಿವಮೊಗ್ಗ ,ಎ.01 : ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಇರುವ ಮೈದಾನದ ಮುಖ್ಯದ್ವಾರಕ್ಕೆ ಹಾಕಲಾಗಿದ್ದ ಬೇಲಿಯನ್ನು ಪೊಲೀಸ್ ಸರ್ಪಗಾವಲಿನ ನಡುವೆ  ಸಂಜೆ ತೆರವುಗೊಳಿಸಲಾಯಿತು.

ಈ ಮೈದಾನದಲ್ಲಿ ಮುಸ್ಲಿಂ ಬಾಂಧವರು ತಮ್ಮ ಹಬ್ಬ ಹರಿದಿನಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ನಿನ್ನೆ ರಂಜಾನ್ ಪ್ರಯುಕ್ತ ಇದೇ ಸ್ಥಳದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಲಾಗಿತ್ತು. ಆದರೆ ಇಂದು ಬೆಳಿಗ್ಗೆ  ಮೈದಾನದ ಮುಖ್ಯದ್ವಾರಕ್ಕೆ ಆಳೆತ್ತರದ ಬೇಲಿಯನ್ನ ಅಳವಡಿಸಲಾಗಿತ್ತು ಇದರಿಂದಾಗಿ ಸುತ್ತಮುತ್ತಲಿನ ವಾಣಿಜ್ಯ ಮಳಿಗೆಗಳಿಗೆ ಬರುವ ನಾಗರಿಕರಿಗೆ ವಾಹನ ನಿಲುಗಡಿಗೆ ತೀವ್ರ ಸಮಸ್ಯೆಯಾಗಿತ್ತು.

ಅಲ್ಲದೆ ಈ ಮೈದಾನದಲ್ಲಿರುವ ಎಸ್‌ಬಿಐ ಕಚೇರಿಗೆ ಬರುವ ಗ್ರಾಹಕರಿಗೂ ಕೂಡ ಸಾಕಷ್ಟು ತೊಂದರೆ ಆಗಿತ್ತು ಈ ಬೇಲಿಯನ್ನ ತೆರವುಗೊಳಿಸುವಂತೆ ಹಿಂದೂಪರ ಸಂಘಟನೆಗಳು ಬೃಹತ್ ಪ್ರತಿಭಟನೆಯನ್ನ ನಡೆಸಿದ್ದವು. ಈ ಜಾಗ ಮಹಾನಗರ ಪಾಲಿಕೆಗೆ ಸೇರಿದ್ದು ಇದಕ್ಕೆ ಬೇಲಿ ಹಾಕುವ ಮೂಲಕ ಸಾರ್ವಜನಿಕರಿಗೆ ತೊಂದರೆ ಮಾಡಲಾಗುತ್ತಿದೆ ಎಂಬ ಒತ್ತಾಯವನ್ನ ಮಾಡಲಾಗಿತ್ತು.

ಸ್ಥಳಕ್ಕೆ ಆಗಮಿಸಿದ ಜಿಲ್ಲಾ ರಕ್ಷಣಾಧಿಕಾರಿಗಳು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಸಂಜೆ ವೇಳೆಗೆ ಈ ಬೇಲಿಯನ್ನ ತೆರಗೊಳಿಸಲಾಗುವುದು ಎಂಬ ಭರವಸೆಯನ್ನ ನೀಡಿದ್ದರು, ಅದರಂತೆ ಸಂಜೆ ಸುತ್ತಮುತ್ತಲಿನ ಎಲ್ಲಾ ವಾಣಿಜ್ಯ ಮಳಿಗೆಗಳನ್ನು ಬಂದ್ ಮಾಡಿಸಿ ಸೂಕ್ತ ಪೊಲೀಸ್  ಬಂದೋಬಸ್ತನ್ನು ಏರ್ಪಡಿಸಿಕೊಂಡು ಬೇಲಿಯನ್ನು ತೆರವುಗೊಳಿಸಲಾಯಿತು. ಮುಂಜಾಗ್ರತಾ ಕ್ರಮವಾಗಿ ಪೋಲಿಸ್ ಪಹರೆಯನ್ನ ಬಿಗಿಗೊಳಿಸಲಾಗಿದೆ.

Share This Article
";