ಮನೆಗೆ ಬೀಗ ಹಾಕಿದ್ದ ಫೈನಾನ್ಸ್ ವಿರುದ್ದ ರೈತ ಸಂಘದ ಆಕ್ರೋಶ

Kranti Deepa

ಶಿವಮೊಗ್ಗ, ಫೆ. 26 : ಭದ್ರಾವತಿ ತಾಲೂಕಿನ ಅಗರದಹಳ್ಳಿ ಗ್ರಾಮದಲ್ಲಿ ಖಾಸಗಿ ಫೈನಾನ್ಸ್ ಸಂಸ್ಥೆಯೊಂದು, ಸಾಲ ಮರು ಪಾವತಿಸದ ವ್ಯಕ್ತಿಯೋರ್ವರ ಕುಟುಂಬಕ್ಕೆ ಸೇರಿದ ಎರಡು ಮನೆಗಳ ಬಾಗಿಲಿಗೆ ಕಳೆದ ಎರಡು ತಿಂಗಳ ಹಿಂದೆ ನೋಟೀಸ್ ಅಂಟಿಸಿ, ಬೀಗ ಹಾಕಿದ್ದ ಘಟನೆ ಬೆಳಕಿಗೆ ಬಂದಿದೆ.

ಕೂಲಿ ಕಾರ್ಮಿಕ ಚೌಡಪ್ಪ ಹಾಗೂ ಅವರ ಸಹೋದರನಿಗೆ ಸೇರಿದ ಮನೆಗಳಿಗೆ ಫೈನಾನ್ಸ್ ಸಂಸ್ಥೆ ಬೀಗ ಹಾಕಿದೆ. ಇದಕ್ಕೆ ರೈತ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಸಂಬಂಧ ಭದ್ರಾವತಿ ನಗರದಲ್ಲಿರುವ ಫೈನಾನ್ಸ್ ಸಂಸ್ಥೆಯ ಕಚೇರಿ ಎದುರು ಫೆ. 25 ರಂದು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದೆ. ತಕ್ಷಣವೇ ಮನೆಗಳ ಬಾಗಿಲಿಗೆ ಅಂಟಿಸಿರುವ ನೋಟೀಸ್ ಹಾಗೂ ಬೀಗ ತೆರವುಗೊಳಿಸುವಂತೆ ಆಗ್ರಹಿಸಿದೆ.

ಚೌಡಪ್ಪ ಅವರು ಎರಡು ಲಕ್ಷ ರೂ. ಸಾಲ ಪಡೆದುಕೊಂಡಿದ್ದರು. 9 ಕಂತುಗಳನ್ನು ಪಾವತಿಸಿದ್ದಾರೆ. ಉಳಿದ ಹಣ ವಸೂಲಿ ಮಾಡಲು ಫೈನಾನ್ಸ್ ಸಂಸ್ಥೆಯುವರ ಚೌಡಪ್ಪ ಹಾಗೂ ಅವರ ಸಹೋದರನಿಗೆ ಸೇರಿದ ಎರಡು ಗುಡಿಸಲುಗಳ ಬಾಗಿಲುಗಳಿಗೆ ಬೀಗ ಹಾಕಿತ್ತು.

ಮತ್ತೊಂದೆಡೆ, ಫೈನಾನ್ಸ್ ನವರ ಕಿರುಕುಳ ತಾಳಲರಾದೆ ಚೌಡಪ್ಪ ಅವರು ಪತ್ನಿಯೊಂದಿಗೆ ನಾಪತ್ತೆಯಾಗಿದ್ದಾರೆ ಎಂದು ರೈತ ಸಂಘ ಆರೋಪಿಸಿದೆ. ತಕ್ಷಣವೇ ಜಿಲ್ಲಾಡಳಿತ ಸಾಲ ವಸೂಲಾತಿ ನೆಪದಲ್ಲಿ ಬಡವರಿಗೆ ತೊಂದರೆ ಕೊಡುತ್ತಿರುವ ಮೈಕ್ರೋ ಫೈನಾನ್ಸ್ ಗಳ ವಿರುದ್ದ ಶಿಸ್ತುಕ್ರಮ ಜರುಗಿಸಬೇಕು. ದಬ್ಬಾಳಿಕೆಗೆ ಕಡಿವಾಣ ಹಾಕಬೇಕು ಎಂದು ಸಂಘಟನೆ ಆಗ್ರಹಿಸಿದೆ.

ಪ್ರತಿಭಟನೆಯಲ್ಲಿ ರೈತ ಸಂಘಟನೆಯ ಕಾರ್ಯಾಧ್ಯಕ್ಷರಾದ ಯಶವಂತರಾವ್ ಘೋರ್ಪಡೆ, ಮುಖಂಡರಾದ ಹಿರಿಯಣ್ಣಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಡಿ ವಿ, ವೀರೇಶ್, ಚಂದ್ರಪ್ಪ, ರಂಗಪ್ಪ, ಹಂಚಿನಸಿದ್ದಾಪುರ ವೀರೇಶ್, ತಿಮ್ಮಣ್ಣ ಮೊದಲಾದವರಿದ್ದರು.

Share This Article
";