ಆನೆಗಳ ತಾಲೀಮು: ದಾರಿಯುದ್ದಕ್ಕೂ ಜನರಿಗೆ ದರ್ಶನ

Kranti Deepa

ಶಿವಮೊಗ್ಗ ಸೆ .26: ಮೈಸೂರು ಹೊರತುಪಡಿಸಿ, ದಸರಾದ ಜಂಬೂ ಸವಾರಿ ವೈಭವವನ್ನು ನೋಡಲು ಸಾಧ್ಯವಿರುವುದು ಶಿವಮೊಗ್ಗದ ನಾಡಹಬ್ಬದಲ್ಲಿ ಮಾತ್ರ. ಇಲ್ಲಿ ಪ್ರತಿ ವರ್ಷ ಮೂರು ಆನೆಗಳನ್ನು ಕರೆತರುವ ಸಂಪ್ರದಾಯ ಪಾಲಿಸಲಾಗುತ್ತಿದೆ.

ಈ ವರ್ಷವೂ ದಸರಾ ಜಂಬೂಸವಾರಿಗೆ  ಸಕ್ರೆಬೈಲು ಬಿಡಾರದ ಆನೆಗಳಾದ ಸಾಗರ್, ಬಾಲಣ್ಣ ಮತ್ತು ಬಹದ್ದೂರ್ ಆನೆಗಳು ಬಂದಿವೆ. ಈಗ ಈ ಆನೆಗಳು ನಗರದೊಳಕ್ಕೆ ಅಂದರೆ (ತಾಲೀಮು) ದಸರಾ ಮೆರವಣಿಗೆ ಸಾಗುವ ಮಾರ್ಗದಲ್ಲಿ ದಿನನಿತ್ಯ ಸಂಚರಿಸಿ ದಾರಿಯನ್ನು ರೂಢಿ ಮಾಡಿಕೊಳ್ಳುತ್ತಿವೆ. ಸಾಗುವ ಮಾರ್ಗದಲ್ಲಿ ಜನರಿಗೆ ಅಚ್ಚರಿಯೋ ಅಚ್ಚರಿ. ರಸ್ತೆಯ ಇಕ್ಕೆಲಗಳಲ್ಲಿ ಮನೆಗಳಲ್ಲಿ ನಿಂತು ಆನೆಯ ಮಂದಗತಿಯ  ಪಯಣವನ್ನು ಎವೆಯಿಕ್ಕದೆ ನೋಡಿ ಸಂತಸಪಡುತ್ತಿದ್ದಾರೆ.

ಬಂದಿರುವ ಆನೆಗಳಿಗೆ ಕೋಟೆ ರಸ್ತೆಯ ವಾಸವಿ ಶಾಲೆ ಆವರಣದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ. ಆನೆಗಳನ್ನು ಹತ್ತಿರದಿಂದ ನೋಡಲು ಇದೊಂದು ಸದವಕಾಶವಾಗಿರುವುದರಿಂದ  ಬೆಳಗ್ಗೆಯಿಂದಲೆ ಜನರು ಶಾಲೆಯತ್ತ ಆಗಮಿಸಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಪಾಲಕರು ಚಿಕ್ಕಮಕ್ಕಳನ್ನು ಕರೆತಂದು ಆನೆಗಳನ್ನು ತೋರಿಸಿ ಖುಷಿಪಡಿಸುತ್ತಿದ್ದಾರೆ.

ಈ ಆನೆಗಳು ಜಂಬೂ ಸವಾರಿ ಸಾಗುವ  ಕೋಟೆ ರಸ್ತೆ, ಗಾಂಧಿ ಬಜಾರ್, ಶಿವಪ್ಪ ನಾಯಕ ಪ್ರತಿಮೆ, ನೆಹರು ರಸ್ತೆ, ದುರ್ಗಿಗುಡಿ ಮತ್ತು ಜೈಲ್ ರಸ್ತೆ ಮಾರ್ಗವಾಗಿ ಸಾಗುತ್ತಿವೆ. ವಾಹನ ಮತ್ತು ಜನಸಂಚಾರದ ಭರಟೆಯ ಮಧ್ಯೆಯೇ ಪ್ರತಿದಿನ ಎರಡು ಸಲ ಓಡಾಡುತ್ತಿವೆ. ಜನ ಸಂತಸದಿಂದ ಆನೆಗಳ ಸಾಗುವಿಕೆಯನ್ನು ನೋಡಿ ಹರ್ಷಿತರಾಗುತ್ತಿದ್ದಾರೆ. ಅಲ್ಲಮಪ್ರಭು ಮೈದಾನದಲ್ಲೂ ಆನೆ ನೋಡಲು ಆ ಭಾಗದ ಜನರು ಸೇರುತ್ತಿದ್ದಾರೆ. ಹಳೆ ಮತ್ತು ಹೊಸ ಶಿವಮೊಗ್ಗದ ಭಾಗದ ಜನರಿಗೆ ಆನೆಯನ್ನು ಹತ್ತಿರದಿಂದ ನೋಡುವ ಅವಕಾಶ ಲಭ್ಯವಾಗಿದೆ.

Share This Article
";