ಶಿವಮೊಗ್ಗ ,ಅ.05 :ದಸರಾದ ಜಂಬೂ ಸವಾರಿಗೆ ಆಗಮಿಸಿರುವ ಸಕ್ರೆಬೈಲು ಬಿಡಾರದ ಆನೆಗಳಿಗೆ ತಾಲೀಮು ಆರಂಭವಾಗಿದೆ. ಶನಿವಾರ ಬೆಳಗ್ಗೆಯಿಂದಲೇ ನಗರದ ರಸ್ತೆಗಿಳಿದ ಆನೆಗಳು ಮೆರವಣಿಗೆ ಸಾಗುವ ಹಾದಿಯಲ್ಲಿ ಕ್ರಮಿಸಿದವು.
ಸಕ್ರೆಬೈಲು ಬಿಡಾರದ ಸಾಗರ, ಬಾಲಣ್ಣ ಮತ್ತು ಬಹದ್ದೂರ್ ಆನೆಗಳು ತಾಲೀಮು ನಡೆಸಿದವು. ವಾಸವಿ ಶಾಲೆಯಿಂದ ಹೊರಟ ಆನೆಗಳು ಕೋಟೆ ರಸ್ತೆ, ಗಾಂಧಿ ಬಜಾರ್, ಬಿ.ಹೆಚ್.ರಸ್ತೆ, ಎ.ಎ.ಸರ್ಕಲ್, ನೆಹರೂ ರಸ್ತೆ, ದುರ್ಗಿಗುಡಿ, ಜೈಲ್ ರೋಡ್ ಮೂಲಕ ಫ್ರೀಡಂ ಪಾರ್ಕ್‌ವರೆಗೆ ತೆರಳಿ ಹಿಂತಿರುಗಿದವು.
ವಾಹನ, ಜನದಟ್ಟಣೆ ಕಡಿಮೆ ಇರುವುದು ಮತ್ತು ಆನೆಗಳಿಗೆ ನಗರದ ಗಿಜಿಗುಡುವ ವಾತಾವರಣಕ್ಕೆ ಹೊಂದಾಣಿಕೆ ಮಾಡಿಸುವ ಸಲುವಾಗಿ ಬೆಳಗ್ಗೆ ತಾಲೀಮು ನಡೆಸಲಾಗಿದೆ. ಆನೆಗಳು ಸಾಗುವ ಹಾದಿಯಲ್ಲಿ ಜನರ ನಿಯಂತ್ರಣಕ್ಕೆ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ನಿಯೋಜಿಸಲಾಗಿತ್ತು. ಕಳೆದ ರಾತ್ರಿ ಆನೆಗಳು ಸಕ್ರೆಬೈಲು ಬಿಡಾರದಿಂದ ಶಿವಮೊಗ್ಗಕ್ಕೆ ಆಗಮಿಸಿವೆ.