ಶಿವಮೊಗ್ಗ,ಡಿ. 19 : ಅಂಬೇಡ್ಕರ್ – ಅಂಬೇಡ್ಕರ್ ಎಂದು ಹೇಳುವುದು ಇತ್ತೀಚೆಗೆ ಕೆಲವರಿಗೆ ಫ್ಯಾಶನ್ ಆಗಿದೆ. ಅಂಬೇಡ್ಕರ್ ಬದಲು ದೇವರ ಹೆಸರು ಹೇಳಿದ್ದರೆ ಏಳೇಳು ಜನ್ಮದಲ್ಲೂ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು ಎಂದು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಸಂಸತ್ ಕಲಾಪದಲ್ಲಿ ಮಾತನಾಡಿರುವುದನ್ನು ಪ್ರೊ.ಬಿ ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಖಂಡಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಸಮಿತಿಯ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿರುವ ಸಂವಿಧಾನದ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಮಿತ್ ಶಾ ,ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮತ್ತು ಕೀಳಾಗಿ ಮಾತನಾಡಿರುವುದು ಅಂಬೇಡ್ಕರ್ ಮತ್ತು ಸಂವಿಧಾನಕ್ಕೆ ಮಾಡಿರುವ ಅಪಮಾನವಾಗಿದೆ. ಕೋಮುವಾದಿಗಳು ಯಾವಾಗಲೂ ಅಂಬೇಡ್ಕರ್ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇರೊಂದು ಇಲ್ಲ ಎಂದು ಹೇಳಿದ್ದಾರೆ.
ಸಾಮಾಜಿಕ ಘನತೆಯನ್ನು ಮತ್ತು ಸಮಾನತೆಯನ್ನು ತಂದು ಕೊಟ್ಟವರು ಅಂಬೇಡ್ಕರ್. .ಅಂಬೇಡ್ಕರ್ ಎನ್ನುವ ವ್ಯಕ್ತಿ ಭಾರತದಲ್ಲಿ ಹುಟ್ಟದೆ ಹೋಗಿದ್ದರೆ ಸಂವಿಧಾನವನ್ನು ಬರೆಯದೆ ಹೋಗಿದ್ದರೆ ನೀವು ಈ ದೇಶದ ಗೃಹ ಮಂತ್ರಿ ಆಗುತ್ತಿರಲಿಲ್ಲ. ನೀವು ಯಾರದೋ ಮನೆಯ ಚಾಕರಿಯನ್ನು ಮಾಡಿಕೊಂಡು ಇರಬೇಕಾಗಿತ್ತು.ನೀವಾಡುವ ಮಾತುಗಳು, ಬಳಸುವ ಪದಗಳನ್ನು ಗಮನಿಸಿದರೆ “ಮನುಸ್ಮೃತಿ” ಯನ್ನು ಮತ್ತೊಮ್ಮೆ ಈ ದೇಶದಲ್ಲಿ ಜಾರಿಗೊಳಿಸುವ ಹುನ್ನಾರ ಇದಾಗಿದೆ ಎಂದಿದ್ದಾರೆ.
ಆದ್ದರಿಂದ ಪ್ರಧಾನ ಮಂತ್ರಿಗಳಿಗೆ ಅಂಬೇಡ್ಕರ್ ಬಗ್ಗೆ ಗೌರವ ಇದ್ದರೆ ತಕ್ಷಣವೇ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಯನ್ನು ಪಡೆಯಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಒತ್ತಾಯಿಸಿದೆ. ಒಂದು ವೇಳೆ ತಾವುಗಳು ರಾಜೀನಾಮೆಯನ್ನು ಪಡೆಯದಿದ್ದರೆ ದೇಶಾದ್ಯಂತ ನಡೆಯುವ ಹೋರಾಟವನ್ನು ತಡೆಯಲು ಸಾಧ್ಯವಿಲ್ಲ ಎನ್ನುವ ಎಚ್ಚರಿಕೆಯನ್ನು ಸಮಿತಿಯು ಈ ಮೂಲಕ ನೀಡಿದೆ.