ಶಿವಮೊಗ್ಗ,ಫೆ.10 : ಮ್ಯಾಟ್ರಿಮೋನಿಯ ಅಪ್ಲಿಕೇಶನ್‌ಗಳಲ್ಲಿ ಅಪರಿಚಿತರ ಜೊತೆ ಸಂಪರ್ಕ ಸಾಧಿಸುವಾಗ ಅವರ ಪೂರ್ವಪರವನ್ನು ವಿಚಾರಿಸಿ ಅವರನ್ನು ನಂಬಿ ಮೋಸ ಹೋಗದಂತೆ ಶಿವಮೊಗ್ಗ ಪೊಲೀಸ್ ಇಲಾಖೆ ವ್ಯಕ್ತಿಯೊಬ್ಬನ ಫೋಟೋ ಹಾಗೂ ಆತ ನಡೆಸಿದ ವಂಚನೆ ಪ್ರಕರಣಗಳನ್ನು ಪ್ರಕಟಿಸಿ ಎಚ್ಚರಿಕೆ ನೀಡಿದೆ.
ಭದ್ರಾವತಿಯ ಹಳೆನಗರ ಪೊಲೀಸ್ ಠಾಣೆಯಲ್ಲಿ ಈತನಿಂದ ವಂಚನೆಗೊಳಗಾದ ಮಹಿಳೆ 27-09-2024 ರಂದು ಪ್ರಕರಣ ದಾಖಲಿಸಿದ್ದರು. ಮ್ಯಾಟ್ರಿಮೋನಿ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ, ಈ ಮೊದಲೇ ತಾನು ಮದುವೆಯಾಗಿರುವುದನ್ನು ಮರೆಮಾಚಿ, ತನ್ನನ್ನು ಮದುವೆಯಾಗುವುದಾಗಿ ನಂಬಿಸಿ, ಅವರಿಂದ ಹಣ ಮತ್ತು ಒಡವೆಗಳನ್ನು ಪಡೆದು ಮೋಸ ಮಾಡಿದ್ದಾನೆ ಎನ್ನುವುದು ಈ ಪ್ರಕರಣದ ಸಾರಾಂಶ.
ಭೀಮರಾಜ್ ಎಂಬಾತ ಭದ್ರಾವತಿ ನಿವಾಸಿ 40 ವರ್ಷದ ಮಹಿಳೆಯನ್ನು ಮ್ಯಾಟ್ರಿಮೋನಿ ಆಪ್ ಮೂಲಕ ಸಂಪರ್ಕಿಸಿ ಅವರನ್ನು ಮದುವೆಯಾಗುವುದಾಗಿ ನಂಬಿಸಿದ್ದ. ಆ ಬಳಿಕ ಮಹಿಳೆಯ ಜೊತೆಗೆ ಕಾಂಟಾಕ್ಟ್‌ನಲ್ಲಿದ್ದು ತನ್ನ ತಾಯಿಯ ಆರೋಗ್ಯ ಸರಿಯಿಲ್ಲ, ಅವರ ಚಿಕಿತ್ಸೆಗಾಗಿ ಹಣದ ಅವಶ್ಯಕತೆ ಇದೆ ಎಂದು ಹೇಳಿ ಫೋನ್ ಪೇ ಮೂಲಕ ಒಟ್ಟು ರೂ. 5,43,451 ಗಳನ್ನು ಪಡೆದಿದ್ದ.
ತದನಂತರ ರೂ 2,00,000 ಕ್ಯಾಶ್ ಪಡೆದುಕೊಂಡಿದ್ದ. ಇಷ್ಟು ಸಾಲದು ಎಂಬಂತೆ ಕಛೇರಿ ಸಮಾರಂಭಕ್ಕೆ ಬೇಕು ಎಂದು ಹೇಳಿ ಸುಮಾರು 2, 25,000 ಮೌಲ್ಯದ ಬಂಗಾರವನ್ನು ಪಡೆದುಕೊಂಡಿದ್ದ. ಆ ಬಳಿಕ ಸಂಪರ್ಕಕ್ಕೆ ಸಿಗದೆ ವಂಚಿಸಿದ್ದ. ಈ ಸಂಬಂಧ ಸಂತ್ರಸ್ತೆ ದಾಖಲಿಸಿದ ದೂರಿನನ್ವಯ ಪೊಲೀಸರು ಕೇಸ್ ದಾಖಲಿಸಿದ್ದರು.
ಆರೋಪಿ ಮೇಲಿದೆ 12 ಕೇಸ್ : ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಮಾಡಿದಾಗ ಆತ ವಿಜಯಪುರದ ಜಿಲ್ಲೆ, ವಿಜಯಪುರ ತಾಲ್ಲೂಕು ವಾಸಿ ಭೀಮರಾಜ್ ಎಂದು ಗೊತ್ತಾಗಿದೆ. ಆತನ ವಿರುದ್ಧ 10 ಪೊಲೀಸ್ ಠಾಣೆಗಳಲ್ಲಿ ಒಟ್ಟು 12 ಕೇಸ್‌ಗಳಿರುವುದು ಗೊತ್ತಾಗಿದೆ. ಪ್ರಸ್ತುತ ಆತ ಕೊಪ್ಪಳ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವುದು ಸಹ ತಿಳಿದುಬಂದಿದೆ. ಮೋಸ, ವಂಚನೆ, ನಂಬಿಕೆ ದ್ರೋಹದ ಕೇಸ್‌ಗಳನ್ನು ಎದುರಿಸುತ್ತಿರುವ ಆರೋಪಿ ಅದನ್ನು ಉದ್ಯೋಗ ಮಾಡಿಕೊಂಡಿದ್ದ. ಈ ನಿಟ್ಟಿನಲ್ಲಿ ಸಾರ್ವಜನಿಕರನ್ನ ಎಚ್ಚರಿಸುವ ನಿಟ್ಟಿನಲ್ಲಿ ಪೊಲೀಸರು ಇಂತಹ ವ್ಯಕ್ತಿಗಳನ್ನು ನಂಬಿ ಮೋಸ ಹೋಗದಿರಿ ಎಂದು ಇಲಾಖೆ ತಿಳಿಸಿದೆ.
 
					 
  
			 
                     
                     
                     
                     
                    
 
    