ಸಿದ್ದರಾಮಯ್ಯ ದೀರ್ಘಾವಧಿ ಮುಖ್ಯಮಂತ್ರಿ : ಕಾಂಗ್ರೆಸ್ಸಿಗರಿಂದ ಬಿರಿಯಾನಿ, ಸಿಹಿ ವಿತರಣೆ

Kranti Deepa

ಶಿವಮೊಗ್ಗ,ಜ.06 : ಮುಖ್ಯಮಂತ್ರಿ, ಅಹಿಂದ ನಾಯಕ ಸಿದ್ಧರಾಮಯ್ಯ ಅವರು 2792  ದಿನ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದು, ಮಾಜಿ ಸಿಎಂ ದೇವರಾಜ ಅರಸು ಅವರ ದಾಖಲೆ ಸರಿಗಟ್ಟಿದ ಸಂಭ್ರಮದ ಅಂಗವಾಗಿ ಸಿದ್ಧರಾಮಯ್ಯ ಅಭಿಮಾನಿಗಳಿಂದ ಮಂಗಳವಾರ ಅಶೋಕ ವೃತ್ತ, ಮೆಗ್ಗಾನ್ ಆಸ್ಪತ್ರೆ ಮತ್ತು ವಿವಿಧೆಡೆ ನಾಟಿ ಕೋಳಿ ಬಿರಿಯಾನಿ ಮತ್ತು ಸಿಹಿಯನ್ನು ಸಾರ್ವಜನಿಕರಿಗೆ ಹಂಚಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ಪ್ರಸನ್ನಕುಮಾರ್, ಸಿದ್ಧರಾಮಯ್ಯ ಎಲ್ಲಾ ಮುಖ್ಯಮಂತ್ರಿಗಳಿಗಿಂತ ಹೆಚ್ಚಿನ ಅವಧಿ ಯಶಸ್ವಿಯಾಗಿ ಮುಖ್ಯಮಂತ್ರಿಯಾಗಿ 16 ಬಾರಿ ಬಜೆಟ್ ಮಂಡನೆ ಮಾಡಿ ದಾಖಲೆ ನಿರ್ಮಿಸಿದ್ದಾರೆ. ಅವರಿಗೆ ರಾಜ್ಯದ ಜನರ ಆಶೀರ್ವಾದವಿದೆ. ಉಚಿತ ಅಕ್ಕಿ, ಶಕ್ತಿ ಯೋಜನೆ, ಯುವನಿಧಿ, ಗೃಹಜ್ಯೋತಿ, ಗೃಹಲಕ್ಷ್ಮಿ 5 ಗ್ಯಾರಂಟಿಗಳನ್ನು ನಿರಂತರವಾಗಿ ನೀಡಿ ಯಶಸ್ವಿಯಾಗಿದ್ದಾರೆ.

ಶಕ್ತಿ ಯೋಜನೆಯಡಿ ಉಚಿತವಾಗಿ ಬಸ್ ನಲ್ಲಿ ಪ್ರಯಾಣಿಸಿದ ತಾಯಂದಿರು ಮನಪೂರ್ವಕವಾಗಿ ಅವರನ್ನು ಹರಸಿದ್ದಾರೆ. ಕೊಟ್ಟ ಮಾತು ಉಳಿಸಿದ ಏಕೈಕ ಮುಖ್ಯಮಂತ್ರಿ ಅವರು. 56 ಸಾವಿರ ಕೋಟಿ ರೂ.ಗಳ ಗ್ಯಾರಂಟಿ ಯೋಜನೆಯಲ್ಲಿ ಯಾರಿಗೂ ನಯಾಪೈಸೆ ಕಮಿಷನ್ ಇಲ್ಲದೇ ನೇರವಾಗಿ ಫಲಾನುಭವಿಗಳಿಗೆ ಸಿಗುವ ಹಾಗೆ ಮಾಡಿದ್ದಾರೆ. ಆದ ಕಾರಣ ಅವರಿಗೆ ಜನರ ಆಶೀರ್ವಾದ ಇದೆ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್ ಮಾತನಾಡಿ, ಅಂದು ಅರಸು ಇಂದು ಸಿದ್ಧರಾಮಯ್ಯ ಬಡವರಿಗೆ ನೆಮ್ಮದಿ ಕೊಟ್ಟವರು. ಅವರ ಗ್ಯಾರಂಟಿ ಯೋಜನೆ ಎಲ್ಲರ ಮನೆಗೂ ಈಗಾಗಲೇ ತಲುಪಿದೆ. ನಮ್ಮ ಕಾರ್ಯಕರ್ತರು ಪ್ರತಿ ಮನೆಗೂ ಭೇಟಿ ನೀಡಿ ಆ ಯೋಜನೆಯ ಪ್ರಾಮುಖ್ಯತೆಯನ್ನು ವಿವರಿಸುವ ಕೆಲಸ ಮಾಡಬೇಕು ಎಂದರು.
ಯುವ ನಾಯಕ ಕೆ. ರಂಗನಾಥ್ ಮಾತನಾಡಿ, ರೆಕಾರ್ಡ್ ಮುಖ್ಯಮಂತ್ರಿ ಸಿದ್ಧರಾಮಯ್ಯನವರು. ದೀರ್ಘಾವಧಿ ಮುಖ್ಯಮಂತ್ರಿಯಾಗಿದ್ದಾರೆ. ಪ್ರೀತಿ ಪೂರ್ವಕವಾಗಿ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ. 30 ಅಡಿ ಎತ್ತರದ ಅವರ ಕಟೌಟ್ ಗೆ ಪುಷ್ಪವೃಷ್ಠಿ ಸಲ್ಲಿಸಿ ಒಟ್ಟು ವಿವಿಧೆಡೆ 5  ಸಾವಿರಕ್ಕೂ ಹೆಚ್ಚು ಜನರಿಗೆ ನಾಟಿಕೋಳಿ ಬಿರಿಯಾನಿ ಮತ್ತು ಸಿಹಿ ಹಂಚಿ ಹಬ್ಬದ ವಾತಾವರಣ ಮೂಡಿಸಿದ್ದಾರೆ. ಅವರ ಅಭಿಮಾನಿಗಳ ಸಂಭ್ರಮಾಚರಣೆಯ ಮೂಲಕ ಅವರ ಬಗ್ಗೆ ಇರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಕಲಗೋಡು ರತ್ನಾಕರ್, ಜಿ.ಡಿ. ಮಂಜುನಾಥ್, ಆರ್.ಸಿ. ನಾಯ್ಕ್, ನಾಗರಾಜ್ ಕಂಕಾರಿ, ಕಲೀಂ ಪಾಷಾ,ಹೆಚ್.ಪಿ. ಗಿರೀಶ್, ಸೈಯದ್ ವಾಹಿದ್ ಅಡ್ಡು,  ಸುವರ್ಣಾ ನಾಗರಾಜ್, ಪಾಲಾಕ್ಷಿ, ಲೋಕೇಶ್ ವಿನಯ್ ತಾಂಡ್ಲೆ, ಶಿವಾನಂದ್, ವಿನೋದ್, ಶರತ್ ಮರಿಯಪ್ಪ, ದರ್ಶನ್, ಅಜೀಜ್ ಅಹಮ್ಮದ್, ಸಂತೋಷ್, , ಆರೀಫ್, ರೇಖಾ ರಂಗನಾಥ್, ಕುಮರೇಶ್, ಪವನ್, ರಾಕೇಶ್, ಗುರುಪ್ರಸಾದ್ ಮತ್ತಿತರರು ಇದ್ದರು.

Share This Article
";