ಧರ್ಮಸ್ಥಳ ಪ್ರಕರಣ : ಚರ್ಚಿಸಿ ಎಸ್‌ಐಟಿ ರಚನೆ

Kranti Deepa
ಮೈಸೂರು,ಜು.18 : ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಕೊಲೆ ಪ್ರಕರಣಗಳ ಆರೋಪಗಳ ಕುರಿತ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಪೊಲೀಸ್ ಇಲಾಖೆಯವರು ಹೇಳಿದರೆ ಅವರೊಂದಿಗೆ ಚರ್ಚಿಸಿ ವಹಿಸುತ್ತೇವೆ ಎಂದು  ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಲ್ಲಿನ ಮಂಡಕಳ್ಳಿ ವಿಮಾನನಿಲ್ದಾಣದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಆರೋಪಗಳ ಕುರಿತ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಬೇಕು ಎಂಬ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರು ನೀಡಿರುವ ಹೇಳಿಕೆಗೆ ನಾವು ಪರವೂ ಇಲ್ಲ, ವಿರೋಧವೂ ಇಲ್ಲ. ಪೊಲೀಸ್ ಇಲಾಖೆಯವರು ಸಲ್ಲಿಸುವ ವರದಿಯ ಆಧಾರದ ಮೇಲೆ, ಎಸ್‌ಐಟಿ ಮಾಡಬೇಕೆಂಬ ಶಿಫಾರಸು ಬಂದರೆ ರಚಿಸುತ್ತೇವೆ. ಶನಿವಾರದೊಳಗೆ ಎಲ್ಲವೂ ಗೊತ್ತಾಗಲಿದೆ ಎಂದರು.
ದೂರುದಾರ 10 ವರ್ಷ ತಲೆಮರೆಸಿಕೊಂಡಿದ್ದ. ಆತ, ಪೊಲೀಸರ ಎದುರು ಹೇಳಿಕೆ ಕೊಟ್ಟಿದ್ದಾನೆ. ನಾನೇ ಹೂತು ಹಾಕಿದ್ದೇನೆ ಎಂದೆಲ್ಲಾ ಹೇಳಿದ್ದಾನೆ. ಆ ಜಾಗಕ್ಕೆ ಕರೆದುಕೊಂಡು ಹೋದರೆ ಹೆಣಗಳನ್ನು ತೋರಿಸುತ್ತೇನೆ ಎಂದೂ ಹೇಳಿದ್ದಾನೆ. ಪೊಲೀಸರು ಏನು ಹೇಳುತ್ತಾರೆಯೋ ನೋಡೋಣ ಎಂದು ಹೇಳಿದರು.
ಈ ಪ್ರಕರಣದಲ್ಲಿ ತನಿಖೆ ಸರಿಯಾಗಿ ಆಗುತ್ತಿಲ್ಲ’ ಎಂಬ ಗೋಪಾಲಗೌಡ ಅವರ ಹೇಳಿಕಗೆ ಪ್ರತಿಕ್ರಿಯಿ ಸಿದ ಮುಖ್ಯಮಂತ್ರಿ, ಕಾನೂನು ರೀತಿ ಮಾಡಬೇಕ ಲ್ಲವೇ? ಕಾನೂನು ಬಿಟ್ಟು ಮಾಡಕ್ಕಾಗುತ್ತಾ? ಎತ್ತು ಈಯ್ತು ಅಂದ್ರೆ ಕೊಟ್ಟಿಗೆಗ್ ಕಟ್ಟು ಅನ್ನೋದಾ? ಎತ್ತು ಕರು ಹಾಕುವುದಿಲ್ಲ. ಕೊಟ್ಟಿಗೆಗೆ ಕಟ್ಟಿ ಅಂದ್ರೆ ಕಟ್ಟಿಬಿಡೋದಾ? ಎಲ್ಲವನ್ನೂ ಕಾನೂನು ರೀತಿ ಮಾಡುತ್ತೇವೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕ ಡಿ.ರವಿಶಂಕರ್, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್, ಬಿ.ಜೆ. ವಿಜಯ್‌ಕುಮಾರ್ ಜೊತೆಗಿದ್ದರು.
ದಲಿತರಿಗೆ ಸ್ಥಾನ ಬಿಟ್ಟುಕೊಡಲಿ ಎಂದು ಹೇಳುತ್ತಿರುವ ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನವನ್ನು ದಲಿತರಿಗೆ ಬಿಟ್ಡು ಕೊಡಲಿ, ನರೇಂದ್ರ ಮೋದಿ ಪ್ರಧಾನಿ ಸ್ಥಾನವನ್ನು ನೀಡಲಿ. ನಮ್ಮಲ್ಲಿ ಎಲ್ಲರೂ ಆಗಿದ್ದಾರೆ. ಕಾಂಗ್ರೆಸ್ ಮಾತ್ರ ಸಂವಿಧಾನ ಹಾಗೂ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆಯೇ ಹೊರತು ಬಿಜೆಪಿಯಲ್ಲ.
-ಮುಖ್ಯಮಂತ್ರಿ

Share This Article
";