ಧರ್ಮಸ್ಥಳ, ಆ. 23: ಧರ್ಮಸ್ಥಳದಲ್ಲಿ ನೂರಾರು ಜನರನ್ನು ಹೂತು ಹಾಕಿರುವುದಾಗಿ ಹೇಳಿ ಭಾರೀ ಸಂಚಲನ ಸೃಷ್ಟಿಸಿದ್ದ ಅನಾಮಿಕ ವ್ಯಕ್ತಿಯನ್ನೇ, ವಿಶೇಷ ತನಿಖಾ ತಂಡ (ಎಸ್ಐಟಿ) ಬಂಧಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ನೇತೃತ್ವದ ಪೊಲೀಸ್ ತಂಡ ಆಗಸ್ಟ್ 22 ರಂದೇ ಅನಾಮಿಕನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿತ್ತು. ಆಗಸ್ಟ್ 23 ರ ಬೆಳಿಗ್ಗೆ ಆತನನ್ನು ಅಧಿಕೃತವಾಗಿ ಬಂಧಿಸಿದೆ ಎಂದು ತಿಳಿದುಬಂದಿದೆ.
ಸದರಿ ಅನಾಮಿಕನು ಈ ಹಿಂದೆ ತಾನು ಧರ್ಮಸ್ಥಳದಲ್ಲಿ ಪೌರ ಕಾರ್ಮಿಕನಾಗಿ ಕಾರ್ಯನಿರ್ವಹಿಸುತ್ತಿದ್ದು, ನೂರಾರು ಶವಗಳನ್ನು ಹೂತಿರುವುದಾಗಿ ಹೇಳಿದ್ದ. ಈ ಕುರಿತಂತೆ ತಲೆ ಬುರುಡೆಯೊಂದನ್ನು ತಂದಿದ್ದ. ನ್ಯಾಯಾಲಯಕ್ಕೆ ಸ್ವಯಂಪ್ರೇರಿತ ದೂರು ಹೇಳಿಕೆ ದಾಖಲಿಸಿದ್ದ.
ಈತನ ಹೇಳಿಕೆಯು ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಸೃಷ್ಟಿಸಿತ್ತು. ಈ ನಡುವೆ ರಾಜ್ಯ ಸರ್ಕಾರವು ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ ರಚನೆ ಮಾಡಿತ್ತು. ಅನಾಮಿಕ ಹೇಳಿದಂತೆ ಧರ್ಮಸ್ಥಳದ ವಿವಿಧೆಡೆ ಎಸ್ಐಟಿ ತಂಡ ಶೋಧ ಕಾರ್ಯಾಚರಣೆ ನಡೆಸಿತ್ತು.
13 ಕಡೆ ಗುಂಡಿ ತೆಗೆದು ಪರಿಶೀಲಿಸಿತ್ತು. ಆದರೆ ಒಂದು ಪಾಯಿಂಟ್ ಹೊರುತುಪಡಿಸಿ, ಉಳಿದೆಡೆ ಅಸ್ಥಿಪಂಜರಗಳು ದೊರಕಿರಲಿಲ್ಲ. ಎಸ್ಐಟಿ ತನಿಖೆ ವೇಳೆ ಅನಾಮಿಕನ ಹೇಳಿಕೆಯ ಬಗ್ಗೆ ಅನುಮಾನ ವ್ಯಕ್ತವಾದ ಕಾರಣದ ಹಿನ್ನೆಲೆಯಲ್ಲಿ, ಈತನನ್ನು ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.