ಬೈಕಿಗೆ ಅಡ್ಡ ಬಂದ ಜಿಂಕೆ: ಸವಾರ ಸಾವು

Kranti Deepa

 ಸೊರಬ, ,ಫೆ.08 : ಬೈಕ್ ಚಾಲನೆಯಲ್ಲಿದ್ದಾಗ ರಸ್ತೆಯಲ್ಲಿ ಏಕಾಏಕಿ ಅಡ್ಡಬಂದ ಜಿಂಕೆಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಬೈಕ್‌ ಸವಾರ ಬಿದ್ದು ಸಾವನ್ನಪ್ಪಿದ ಘಟನೆ ಸೊರಬದಲ್ಲಿ ಸಂಭವಿಸಿದೆ.

ಕುಪ್ಪಗಡ್ಡಯ ಸತೀಶ್ (46) ಸಾವನ್ನಪ್ಪಿದವರು. ಜಿಂಕೆಯಿಂದಾಗಿ ಬೈಕಿನಿಂದ ಬಿದ್ದು ತೀವ್ರ ಗಾಯಗೊಂಡಿದ್ದ ಸತೀಶ್ ಅವರನ್ನು ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಲ್ಲಿಯೇ ಮೃತಪಟ್ಟಿದ್ದಾರೆ. ಸತೀಶ್‌ (46) ಎಂಬುವವರು ಹಾಯಾ ಗ್ರಾಮದಿಂದ ರಾತ್ರಿ 12 ಗಂಟೆ ಹೊತ್ತಿಗೆ ತಮ್ಮೂರು ಕುಪ್ಪಗಡ್ಡೆಗೆ ಬೈಕ್‌ನಲ್ಲಿ ಹಿಂತಿರುಗುತ್ತಿದ್ದರು.

ರಸ್ತೆಯಲ್ಲಿ ದಿಢೀರ್‌ ಎದುರಾದ ಜಿಂಕೆಗೆ ಬೈಕ್‌ ಡಿಕ್ಕಿಯಾಗುವುದನ್ನು ತಪ್ಪಿಸಲು ಯತ್ನಿಸಿದಾಗ ಬಿದ್ದು, ತಲೆಗೆ ಗಂಭೀರ ಗಾಯವಾಗಿತ್ತು. ಹಾಯಾ ಗ್ರಾಮದ ದೇವರಾಜ್‌ ಎಂಬುವವರಿಗೆ ಸತೀಶ್‌ ಕರೆ ಮಾಡಿ ಅಪಘಾತದ ವಿಷಯ ತಿಳಿಸಿದ್ದರು. ಕೂಡಲೆ ಸತೀಶ್‌ ಅವರನ್ನು ಸೊರಬ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು.

ಹೆಚ್ಚಿನ ಚಿಕಿತ್ಸೆಗಾಗಿ ವೆನ್‌ಲಾಕ್‌ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸತೀಶ್‌ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಸೊರಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
";