ತೀರ್ಥಹಳ್ಳಿ, ಡಿ.13 : ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆ ಡಿಸೆಂಬರ್ 19,20,21ರಂದು ಜರುಗಲಿದೆ. ಒಟ್ಟು ಐದು ದಿನ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು ಏಳು ದಿನಗಳ ಕಾಲ ಅನ್ನಸಂತರ್ಪಣೆ ನಡೆಯಲಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.ಪಟ್ಟಣದಲ್ಲಿಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಡಿ.17ರಂದು ಬೆಳಿಗ್ಗೆ ಶ್ರೀ ಗಣಪತಿ ಪೂಜಾಪೂರ್ವಕ ಪುಣ್ಯಾಹ, ಶತರುದ್ರಾಭಿಷೇಕ, ದೇವನಾಂದಿ, ಧ್ವಜಾರೋಹಣ, ಸಾಯಂಕಾಲ ರಂಗಪೂಜೆ, ಅಂಕುರಾರೋಹಣ, ಭೇರಿತಾಡನ, ಕೌತುಕ ಬಂಧನ, ಬಲಿ ಉತ್ಸವಗಳು ನಡೆಯಲಿದೆ. ಡಿ.18ರಂದು ಅಗ್ನಿಜನನ, ಅಧಿವಾಸ ಹೋಮ, ಮಹಾಪೂಜೆ ಸಂಜೆ 4ಕ್ಕೆ ಪುರೋತ್ಸವ ಜರುಗಲಿದೆ.
ಡಿ.19ರಂದು ಶ್ರೀ ಪರಶುರಾಮ ತೀರ್ಥಪೂಜೆ, ತೀರ್ಥಸ್ನಾನ ಬೆಳಿಗ್ಗೆ ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ, ಬಲಿ-ಉತ್ಸವ, ಸಂಜೆ ರಂಗಪೂಜೆ ನಡೆಯಲಿದೆ. ಡಿ.21ರಂದು ಮನ್ಮಹಾರಥಾರೋಹಣ, ಪ್ರಬೋತ್ಸವ, ಚೂರ್ಣೋತ್ಸವ, ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ ಬಲಿ, ಅವಭ್ರುತಸ್ನಾನ, ಸಾಯಂಕಾಲ ಉತ್ಸವ ಜರುಗಲಿದೆ. ಡಿ.22ರಂದು ಸಂಧಾನ, ಪೂರ್ಣಾಹುತಿ, ಧ್ವಜ ಅವರೋಹಣ, ಪ್ರಸಾದ ವಿತರಣೆ, ಸಂಜೆ ಅದ್ದೂರಿ ತೆಪ್ಪೋತ್ಸವ ನೆರವೇರಲಿದೆ. ಈ ಬಾರಿ ವಿಶೇಷ ಆಕರ್ಷಣೆಯಾಗಿ 50 ಅಡಿಯ ಪರಶುರಾಮನ ವಿಗ್ರಹ ಇಡಲಾಗುತ್ತಿದೆ. ಇದು ಸೆಲ್ಫಿ ಪಾಯಿಂಟ್ ಸಹ ಆಗುತ್ತದೆ ಎಂದರು.
ಇನ್ನು ಮೂರು ದಿನಗಳು ಸಹ ಸಾಂಸ್ಕೃತಿಕ ಕಾರ್ಯಕ್ರಮ ತುಂಗಾ ನದಿ ತೀರದಲ್ಲಿ ನಡೆಯಲಿದೆ. ಡಿ. 19 ಕ್ಕೆ ಉದಯ್ ಕುಮಾರ್ ಶೆಟ್ಟಿ ಅವರ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ.ಡಿ 20 ಕ್ಕೆ ಸಂಜೆ ಆರ್ ಜೆ ಫಿಟೈಸ್ ಅವರ ರಾಜ್ಯಮಟ್ಟದ ದೇಹದಾರ್ಡ್ಯ ಸ್ಪರ್ಧೆ ನಡೆಯಲಿದೆ. ಡಿ. 21 ಕ್ಕೆ ಬೀಚ್ ವಾಲಿಬಾಲ್ ಹಾಗೂ ಸಂಜೆ ಸಂಗೀತಾ ಕಾರ್ಯಕ್ರಮ ನಡೆಯಲಿದೆ. ಈ ಬಾರಿ ವೈವಿದ್ಯಮಯ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮ ಅತ್ಯಂತ ವೈಭವದಿಂದ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮ ಜೊತೆಗೆ ಕುರುವಳ್ಳಿ ಭಾಗದಿಂದ ತುಂಗಾ ಆರತಿ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ತೆಪ್ಪೋತ್ಸವ ಸಮಿತಿ ಸಂಚಾಲಕರಾದ ಸೊಪ್ಪುಗುಡ್ಡೆ ರಾಘವೇಂದ್ರ, ಡಾ. ಸುಂದರೇಶ್, ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕಿ ವರಲಕ್ಷ್ಮಿ, ಜಾತ್ರಾ ಸಮಿತಿಯ ಸದಸ್ಯರಾದ ಪಾಂಡುರಂಗಪ್ಪ, ಗೀತಾ ರಮೇಶ್, ಜಯಪ್ರಕಾಶ್ ಶೆಟ್ಟಿ, ನಯನಾ ಜಯಪ್ರಕಾಶ್ ಶೆಟ್ಟಿ, ಜ್ಯೋತಿ ಮೋಹನ್, ರಾಘವೇಂದ್ರ ಶೆಟ್ಟಿ, ಅಮರಾನಾಥ್ ಶೆಟ್ಟಿ, ರತ್ನಾಕರ್ ಶೆಟ್ಟಿ, ಗೀತಾ ರಾಘವೇಂದ್ರ, ಜ್ಯೋತಿ, ಕಿಶೋರ್ ಬಾಳೆಬಯಲು,ಟಿ.ಜೆ.ಅನಿಲ್ ಉಪಸ್ಥಿತರಿದ್ದರು.
