ಶಿವಮೊಗ್ಗ, ಮಾ.25 : ಬದುಕುವ ಛಲ, ಆತ್ಮಸ್ಥೈರ್ಯ ಇದ್ದರೆ ಯಾವುದೇ ರೋಗದಿಂದ ಪಾರಾಗಬಹುದು ಎಂದು ಸ್ತ್ರೀ ರೋಗ ತಜ್ಞೆ ಕರ್ನಲ್ ಡಾ|| ಗುಂಜನ್ ಮಲ್ಹೋತ್ರಾ ಹೇಳಿದರು.
ಶಿವಮೊಗ್ಗ ನಗರದ ನಂಜಪ್ಪ ಲೈಫ್ ಕೇರ್ ನ ಕ್ಯಾನ್ಸರ್ ವಿಭಾಗದಲ್ಲಿ ಹಮ್ಮಿಕೊಂಡಿದ್ದ ಕ್ಯಾನ್ಸರ್ ಜಾಗೃತಿ ಕುರಿತು ಹಮ್ಮಿಕೊಂಡಿದ್ದ ಕಾರ್ಯ್ಕಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಕೋವಿಡ್ ಸಮಯದಲ್ಲಿ ಸ್ತನ ಕ್ಯಾನ್ಸರ್ ಬಂದಿತ್ತು, ಆಗ ನಾನು ಬದುಕುವುದಿಲ್ಲ ಎಂದು ಭಾವಿಸಿದ್ದೆ. ನನ್ನ ಆತ್ಮವಿಶ್ವಾಸ, ತಾಳ್ಮೆ, ಹಾರೈಕೆ ನಾನು ಬದುಕಲು ಕಾರಣವಾಯಿತು. ಸೈನ್ಯಕ್ಕೆ ೨೪ ವರ್ಷ ಸೇವೆ ಸಲ್ಲಿಸಿದ್ದೇನೆ. ನಿಮ್ಮ ಆಲೋಚನೆಗಳು ಸಕಾರಾತ್ಮಕ ಆಗಿದ್ದರೆ ಚಿಕಿತ್ಸೆ ಫಲಕಾರಿಯಾಗುತ್ತದೆ. ಕ್ಯಾನ್ಸರ್ ಎಂಬ ಪದ ಕೇಳಿದ ತಕ್ಷಣ ಜೀವನ ಮುಗಿದು ಹೋಯಿತೆಂದೇ ಎಲ್ಲರೂ ಭಾವಿಸುತ್ತಾರೆ. ಆದರೆ ನನ್ನ ಕುಟುಂಬದಲ್ಲಿ ಎಲ್ಲರೂ ನನಗೆ ಬೆಂಬಲ ನೀಡಿ, ಧೈರ್ಯ ತುಂಬಿದರು. ಕ್ಯಾನ್ಸರ್ ರೋಗಿ ಅಥವಾ ಯಾರೇ ಆದರೂ ಜೀವನದಲ್ಲಿ ಮುಂದುವರೆಯಬೇಕು ಎಂದರು.
ಕ್ಯಾನ್ಸರ್ ರೋಗಿಗಳು ರೋಗಕ್ಕೆ ಹೆದರಿ ಖಿನ್ನತೆಗೆ ಒಳಗಾಗದೇ ಸಕರಾತ್ಮ ಆಲೋಚನೆ ಬೆಳೆಸಿಕೊಳ್ಳಬೇಕು. ಯಾವುದೇ ಸಂದರ್ಭ ಬಂದರೂ ನಮ್ಮನ್ನು ನಾವು ಪ್ರೀತಿಯಿಂದ ಕಾಣಬೇಕು ಎಂದು ಸಲಹೆ ನೀಡಿದರು.
ಆಸ್ಪತ್ರೆಯ ವೈದ್ಯ ಡಾ|| ಗುರುಚನ್ನ ಬಸವಯ್ಯ ಮಾತನಾಡಿ, ನಂಜಪ್ಪ ಆಸ್ಪತ್ರೆ ಮಧ್ಯ ಕರ್ನಾಟಕದಲ್ಲಿ ಏಕೈಕ ಸಮಗ್ರ ಕ್ಯಾನ್ಸರ್ ಚಿಕಿತ್ಸೆ ನೀಡುವ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕ್ಯಾನ್ಸರ್ ಚಿಕಿತ್ಸೆಗೆ ಬೇಕಾದಂತಹ ಅಂಕೊ ಪೆಥಲಾಜಿ ಮತ್ತು ನೋವು ಉಪಷಮನ ವಿಭಾಗವೂ ಇದೆ ಎಂದರು.
ಈ ವೇಳೆ ಮಾತನಾಡಿದ ರೋಗಿ ಗಾಯತ್ರಿ, ನನಗೆ ಕ್ಯಾನ್ಸರ್ ಇರುವುದೇ ಗೊತ್ತಿರಲಿಲ್ಲ. ಕೂದಲು ತುಂಬಾ ಉದುರುತ್ತಿತ್ತು. ನಮ್ಮ ಕುಟುಂಬ ಸ್ನೇಹಿತರೆಲ್ಲರೂ ನನಗೆ ಕೇಳುತ್ತಿದ್ದಾಗ ಅವರಿಗೆ ಏನೇನೋ ಸಬೂಬು ಹೇಳುತ್ತಿದ್ದೆ. ಬಳಿಕ ನಂಜಪ್ಪ ಲೈಫ್‌ಕೇರ್‌ನ ವೈದ್ಯ ಡಾ|| ಗುರುಚನ್ನ ಬಸವಯ್ಯ ಹಾಗೂ ಅವರ ತಂಡದವರು ನನ್ನಲ್ಲಿ ಆತ್ಮವಿಶ್ವಾಸ ತುಂಬಿದರು. ಚಿಕಿತ್ಸೆ ಪಡೆದ ಬಳಿಕ ಈಗ ನನ್ನ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಮೊದಲಿನಂತೆ ಎಲ್ಲ ಕೆಲಸವನ್ನು ನಾನೇ ಮಾಡುತ್ತಿದ್ದೇನೆ. ಕ್ಯಾನ್ಸರ್ ಎಂದಾಕ್ಷಣ ಧೈರ್ಯ ಕಳೆದುಕೊಳ್ಳಬೇಡಿ ವೈದ್ಯರು ಸೂಚಿಸಿದ ಜೀವನಶೈಲಿ ಫಾಲೋ ಮಾಡುತ್ತಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಡಾ|| ನಮ್ರತಾ ಉಡುಪ, ಡಾ|| ಅರವಿಂದನ್, ಡಾ|| ಶರಶ್ಚಂದ್ರ ಹಾಗೂ ಡಾ|| ಶ್ರೀಹರಿ ಮತ್ತು ವೈದ್ಯರು ಉಪಸ್ಥಿತರಿದ್ದರು.