ಡಿ.1 : ಮಿಂಚು ಶ್ರೀನಿವಾಸ ಪತ್ರಿಕಾ ಪ್ರಶಸ್ತಿ ಪ್ರದಾನ

Kranti Deepa

ಶಿವಮೊಗ್ಗ,ನ. 29 :  ನಗರದ ಹಿರಿಯ ಪತ್ರಕರ್ತರಾಗಿದ್ದ ದಿವಂಗತ ಮಿಂಚು ಶ್ರೀನಿವಾಸ ಅವರ ಸ್ಮರಣಾರ್ಥ ಪ್ರತಿವರ್ಷ ಕೊಡುವ ಮಿಂಚು ಶ್ರೀನಿವಾಸ ಪ್ರಶಸ್ತಿಗೆ ಈ ಬಾರಿ ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲ್ಲಿಸಿದ ಇಬ್ಬರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಧಾರವಾಡದಲ್ಲಿ ಡಿ. 2 ರಂದು ನಡೆಯಲಿದೆ ಎಂದು ಮಿಂಚು ಶ್ರೀನಿವಾಸ ಅವರ ಪುತ್ರ್ರ ಎ ಎಸ್ ರವಿಕುಮಾರ್ ಹೇಳಿದರು.

ಪ್ರೆಸ್ ಟ್ರಸ್ಟಿನಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮಿಂಚು ಶ್ರೀನಿವಾಸ ೧೧ನೆಯ ವಾರ್ಷಿಕ ಪ್ರಶಸ್ತಿಯನ್ನು ಗದಗ್‌ನ ನವೋದಯ ಪತ್ರಿಕೆಯ ರಾಜೀವ್ ಕಿದಿಯೂರು ಮತ್ತು 12 ನೆಯ ವಾರ್ಷಿಕ ಪ್ರಶಸ್ತಿಯನ್ನು ಚಿಕ್ಕಮಗಳೂರಿನ ಎಸ್. ಗಿರಿಜಾಶಂಕರ್ ಅವರಿಗೆ ಘೋಷಿಸಲಾಗಿದೆ. ರಾಜೀವ್ ಅವರು ತಮ್ಮ ತಂದೆ ಹರೀಸ್ ರಾವ್ 1976 ರಲ್ಲಿ ಸ್ಥಾಪಿಸಿದ ನವೋದಯ ಪತ್ರಿಕೆಗೆ 1989 ರಿಂದ ಸಂಪಾದಕರಾಗಿದ್ದಾರೆ. ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ವ್ಯಾಪಕ ಪ್ರಸಾರವಿರುವ ಪತ್ರಿಕೆ ಇದಾಗಿದೆ. ಮೊಹರೆ ಹಣಮಂತರಾವ್ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಆಂದೋಲನ ಪ್ರಶಸ್ತಿಗಳು ಅವರಿಗೆ ದಕ್ಕಿವೆ ಎಂದರು.

ಗಿರಿಜಾಶಂಕರ್ ಅವರು, 37  ವರ್ಷಗಳಿಂದ ಈ ವೃತ್ತಿಯಲ್ಲಿದ್ದ್ದು, ಟೈಮ್ಸ್ ಆಫ್ ಇಂಡಿಯಾದ ವರದಿಗಾರರಾಗಿ ಕೆಲಸ ಮಾಡಿದ್ದಾರೆ, ಜನಮಿತ್ರ ಎಂಬ ಪತ್ರಿಕೆಯ ಸಂಪಾದಕರಾಗಿದ್ದಾರೆ. ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾಗಿ, ಕುವೆಂಪು ಭಾಷಾ ಭಾರತಿ ಸದಸ್ಯರಾಗಿ, ಅನೇಕ ಹೋರಾಟಗಳಲ್ಲಿ ಕೆಲಸ ಮಾಡಿದವರಾಗಿದ್ದಾರೆ. ಪರಿಸರ ಪತ್ರಿಕೋದ್ಯಮ ಮತ್ತು ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಸಾಹಿತ್ಯ ಸಿರಿ, ರೋಟರಿ ಪ್ರಶಸ್ತಿಗೂ ಇವರು ಭಾಜನರಾಗಿದ್ದಾರೆ ಎಂದರು.

ಸಿ ಆರ್ ಭಟ್ ಸ್ಮರಣಾರ್ಥ ನೀಡುವ ಸಾಂಸ್ಕೃತಿಕ ಮತ್ತು ಸಾಮಾಜಿಕ ಪುರಸ್ಕ್ಕಾರವನ್ನು ಮಂಗಳೂರಿನ ಭರತನಾಟ್ಯ ಗುರು ಸುಮಂಗಲಾ ರತ್ನಾಕರರಾವ್ ಅವರಿಗೆ, ಬಂಕಾಪುರದ ನಿವೃತ್ತ ಶಿಕ್ಷಕ ದತ್ತಾತ್ರೇಯ ಕುಲಕರ್ಣಿ ಸ್ಮರಣಾರ್ಥ ಕೊಡುವ ಶಿಕ್ಷಣ ಸಿರಿ ಪ್ರಶಸ್ತಿಯನ್ನು ಧಾರವಾಡ ಕವಿವಿಯ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯಲ್ಲಿ 9 ಚಿನ್ನದ ಪದಕ ಪಡೆದ ಕುಮಾರ ದಾದಾಗೌಡ ಪಾಟೀಲ್ ಅವರಿಗೆ, ಎಂ. ಎಲ್. ಜೋಶಿ ಸ್ಮರಣಾರ್ಥ ಕೊಡುವ ರಂಗಪುರಸ್ಕ್ಕಾರಕ್ಕೆ ಧಾರವಾಡದ ಯಕ್ಷಗಾನ ಭಾಗವತ ಮಂಜುನಾಥ ಹೆಗಡೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜ್ಯೋತಿ ರವಿಕುಮಾರ್, ಸುರಭಿ ಅಡಿಗ ಹಾಜರಿದ್ದರು.

ಪ್ರಶಸ್ತಿ ಪ್ರದಾನ ಸಮಾರಂಭ ಡಿ. 1 ರ ಸಂಜೆ 5 ಗಂಟೆಗೆ ಧಾರವಾಡದ ಪಾಟೀಲ್ ಪುಟ್ಟಪ್ಪ ಸಭಾಭವನದಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ನಿವೃತ್ತ ವಿಶೇಷ ಜಿಲ್ಲಾಧಿಕಾರಿ ವ್ಯಾಸ ದೇಶಪಾಂಡೆ ಆಗಮಿಸುವರು. ಅಧ್ಯಕ್ಷತೆಯನ್ನು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ ವಹಿಸುವರು. ಧಾರವಾಡದ ಸಾಕಾರ ಸಂಸ್ಥೆಯ ಆಶ್ರಯದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸಾಕಾರದ ಗೌರವಾಧ್ಯಕ್ಷೆ ನಾಗರತ್ನಾ ಹಡಗಲಿ, ಕಾರ್ಯಾಧ್ಯಕ್ಷೆ ಸಿ. ಶುಭದಾ ಉಪಸ್ಥಿತರಿರುವರು.
-ವೈದ್ಯನಾಥ

Share This Article
";