ಶಿವಮೊಗ್ಗ,ಡಿ.12 : ನಗರದ ಎಸ್. ಪಿ. ಎಂ ರಸ್ತೆಯ ಶಾರದಾ ಸಂಗೀತ ನೃತ್ಯ ವಿದ್ಯಾಲಯದ ವತಿಯಿಂದ ಡಿ. 15 ರ ಭಾನುವಾರದಂದು ಕುವೆಂಪು ರಂಗಮಂದಿರದಲ್ಲಿ ಸಂಜೆ 6.20 ರಿಂದ 8.30 ರ ವರೆಗೆ ” ಅವತರಿಸು ಬಾ ” ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ವಿದ್ಯಾಲಯದ ಪ್ರಾಚಾರ್ಯ ವಿದ್ವಾನ್ ಅರುಣ್ ಕುಮಾರ್, ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಡು, ನೃತ್ಯ ಹಾಗೂ ರೂಪಕದೊಂದಿಗೆ ರಂಗಮಂದಿರದ ಆವರಣದಲ್ಲಿ ಕೃಷ್ಣನ ಲೋಕದ ಅನಾವರಣ ಮಾಡುವ ವಿಭಿನ್ನ ಪ್ರಸ್ತುತಿ ಮೂಲಕ ಆತನ ಪರಿಪೂರ್ಣ ಜೀವನದ ಸಾರವನ್ನು ಈ ವಿಶೇಷ ಕಾರ್ಯಕ್ರಮದಲ್ಲಿ ನೀಡಲಿದ್ದಾರೆ ಎಂದರು.
ಈಗಾಗಲೇ ಗುರುಪೂರ್ಣಿಮೆಯ ಸಂದರ್ಭದಲ್ಲಿ 150 ಕ್ಕೂ ಹೆಚ್ಚು ಮಕ್ಕಳಿಂದ ಏಕ ಕಂಠದಲ್ಲಿ ಭಜನ ಗಾಯನ ಕಾರ್ಯಕ್ರಮ, ಕರ್ನಾಟಕ ಸಂಗೀತದ ಹಿನ್ನೆಲೆ ಹಾಗೂ ಕಲಾವಿದರ ಸಾಧನೆಯ ಬಗ್ಗೆ ತಿಳಿಸಿಕೊಡುವ ಪರಂಪರಾ, ರಾಜ್ಯ ಮಟ್ಟದ ಮನೋಧರ್ಮ ಸಂಗೀತ ಸ್ಪರ್ಧೆ, ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ನಿರಂತರ ನಡೆಸುವ ಸಂಗೀತ ಕಾರ್ಯಕ್ರಮಗಳ ಮೂಲಕ ಹೆಸರು ವಾಸಿಯಾಗಿರುವ ಶಾರದಾ ಸಂಗೀತ ನೃತ್ಯ ವಿದ್ಯಾಲಯವು, ದ್ವಾಪರ ಯುಗದ ಅದಿಯಿಂದ ಅಂತ್ಯದವರೆಗೂ ಕೃಷ್ಣನ ಅವತಾರದ ಪರಿಪೂರ್ಣ ಚಿತ್ರಣವನ್ನು ನಿಖರವಾಗಿ ಎರಡು ಗಂಟೆಗಳ ಕಾರ್ಯಕ್ರಮದಲ್ಲಿ ವಿಭಿನ್ನ ರೀತಿಯಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದೆ ಎಂದರು.
ಕೃಷ್ಣನ ವ್ಯಕ್ತಿತ್ವದ ಪರಿಚಯವನ್ನು, ಮನುಷ್ಯನಾಗಿ ಅವತಾರ ತಾಳಿದ ಆತನ ಚಿಂತನೆಗಳನ್ನು ಅರಿತುಕೊಳ್ಳಲು ಈ ಕಾರ್ಯಕ್ರಮ ಸಹಕಾರಿಯೂ ಆಗಿದೆ ಎನ್ನಬಹುದು. ನೃತ್ಯ ಸಂಯೋಜನೆಯನ್ನು ಕಥಕ್ ನೃತ್ಯ ಗುರುಗಳಾದ ವೀಣಾ ಅರುಣ್ ಮಾಡಿದ್ದು, ರೂಪಕಗಳನ್ನು ಪ್ರವೀಣ್ ಹಾಗೂ ಪವನ್ ಕಾರಂಜಿ ನಿರ್ವಹಿಸಿದ್ದಾರೆ. ಸಂಗೀತ ಸಂಯೋಜನೆ ವಿದ್ವಾನ್ ಜಿ ಅರುಣ್ ಕುಮಾರ್ ಮಾಡಿದ್ದು, ನವನೀತ್ ಕೀಬೋರ್ಡ್ ಸಹಕಾರ ನೀಡಲಿದ್ದಾರೆ. ರಾಘವೇಂದ್ರ ಪ್ರಭು ತಬಲಾದಲ್ಲಿ, ಅವಿನ್ ರವರು ರಿದಂ ಪ್ಯಾಡ್ ನಲ್ಲಿ ಹಾಗೂ ಶ್ರೀವತ್ಸ ರವರು ಕೊಳಲು ವಾದನದಲ್ಲಿ ಸಹಕಾರ ನೀಡಲಿದ್ದಾರೆ ಎಂದು ವಿವರಿಸಿದರು.
ವಿಭಿನ್ನ ಪರಿಕಲ್ಪನೆಯ, ಈ ಕಾರ್ಯಕ್ರಮ ಯಾವುದೇ ಸಭಾ ಕಾರ್ಯಕ್ರಮ ಇಲ್ಲದೇ, ನಿಗದಿತ ಸಮಯಕ್ಕೆ ಸರಿಯಾಗಿ ಆರಂಭ ಆಗಲಿದ್ದು, ಸಾರ್ವಜನಿಕರು ಸಂಜೆ 6.20 ರ ಒಳಗೆ ರಂಗಮಂದಿರದಲ್ಲಿ ಉಪಸ್ಥಿತರಿರಲು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ವೀಣಾ ಅರುಣ್‌ಕುಮಾರ್, ಪವನ್ ಕಾರಂಜಿ, ಚಂದ್ರಶೇಖರ್ ಬಾಯಿರಿ, ಜ್ಯೋತಿ ಬಾಯಿರಿ, ನಾಗಶ್ರೀ, ಪ್ರತಿಮಾ ಶೇಟ್, ಸೌಜನ್ಯಾ, ಶಿಲ್ಪಾ, ವೀಣಾ ಹಾಜರಿದ್ದರು.