ಎನ್. ಮಂಜುನಾಥ್, ಸಂಪಾದಕರು ಕ್ರಾಂತಿದೀಪ ಆದ ನನ್ನ ವಿರುದ್ಧ ಆಧಾರರಹಿತ ಮತ್ತು ಮಾನಹಾನಿಕರ ಆರೋಪಗಳನ್ನು ಮಾಡುತ್ತಿದ್ದ ಹಲೋ ಶಿವಮೊಗ್ಗ ಸಂಪಾದಕ
ಡಿ.ಜಿ. ನಾಗರಾಜ್ ಅವರ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದೆ. ಶಿವಮೊಗ್ಗದ 3 ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಯಶವಂತ್ ಕುಮಾರ್ ಕೆ. ಅವರ ಪೀಠದ ಮುಂದೆ 18 ಫೆಬ್ರವರಿ 2026 ರಂದು ವಿಚಾರಣೆ ನಡೆದು ನನ್ನ ಪರವಾಗಿ ಆದೇಶ ಹೊರಬಿದ್ದಿದೆ. ಓ.ಎಸ್.211 /2025 ಪ್ರಕರಣದಲ್ಲಿ ನನ್ನ ಪರವಾಗಿ ವಕೀಲರಾದ ಜಿ.ಎ. ಏಕಲವ್ಯ ಮತ್ತು ಪ್ರತಿವಾದಿ ಹಲೋ ಶಿವಮೊಗ್ಗ ಸಂಪಾದಕ ಡಿ.ಜಿ. ನಾಗರಾಜ್ ಪರವಾಗಿ ಎಸ್.ಜಿ. ವಿ. ಅವರು ವಾದ ಮಂಡಿಸಿದ್ದರು. ನಾನು ಸಿಪಿಸಿ ಆದೇಶ 39 ನಿಯಮ 1 ( ನ್ಯಾಯಾಲಯದಲ್ಲಿ ದಾವೆ ಇತ್ಯರ್ಥವಾಗುವವರೆಗೆ ಆಸ್ತಿ ಅಥವಾ ವ್ಯಕ್ತಿಯ ರಕ್ಷಣೆಗಾಗಿ ತಾತ್ಕಾಲಿಕ ತಡೆಯಾಜ್ಞೆ ನೀಡುವ ಅಧಿಕಾರವನ್ನು ವಿವರಿಸುತ್ತದೆ) ರ ಅಡಿಯಲ್ಲಿ ತಾತ್ಕಾಲಿಕ ತಡೆಯಾಜ್ಞೆ ಕೋರಿ ಐ.ಎ. ನಂಬರ್ 1 ಅರ್ಜಿಯನ್ನು ಸಲ್ಲಿಸಿದ್ದೆ.
ಪ್ರಕರಣದ ಹಿನ್ನೆಲೆಯನ್ನು ನ್ಯಾಯಾಲಯದ ಆದೇಶದಲ್ಲಿ ವಿಸ್ತೃತವಾಗಿ ದಾಖಲಿಸಲಾಗಿದೆ. ಪ್ರತಿವಾದಿಯು ತಮ್ಮ ಪತ್ರಿಕೆಯಲ್ಲಿ ಸಾರ್ವಜನಿಕವಾಗಿ ವಾದಿಯ (ಎನ್. ಮಂಜುನಾಥ್) ಘನತೆಯನ್ನು ಕುಗ್ಗಿಸುವಂತಹ ಅಸಂಸದೀಯ ಪದಗಳನ್ನು ಬಳಸಿ ಆರೋಪಗಳನ್ನು ಮಾಡಿದ್ದರು. ವಾದಿಯ ವಿರುದ್ಧ ಆರೋಪ ಮಾಡಲು ಪ್ರತಿವಾದಿಯ ಬಳಿ ಯಾವುದೇ ಮಾನ್ಯವಾದ ದಾಖಲೆಗಳಿದ್ದರೆ ಅದನ್ನು ಸಮಾಜದ ಮುಂದಿಡಬಹುದಿತ್ತು. ಆದರೆ, ಪ್ರತಿವಾದಿಯು ತಮ್ಮ ಮಿತಿಗಳನ್ನು ಮೀರಿವಾದಿಯ ವಿರುದ್ಧ ಅನಗತ್ಯ ಪದಗಳನ್ನು ಬಳಸಿದ್ದಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಇದಕ್ಕೆ ಪ್ರತಿಯಾಗಿ ನ್ಯಾಯಾಲಯ ಸಂವಿಧಾನದ 19 (2 ) ನೇ ವಿಧಿ (ವಾಕ್ ಸ್ವಾತಂತ್ರ್ಯದ ಮೇಲೆ ಮಾನನಷ್ಟ, ಸಾರ್ವಜನಿಕ ಸುವ್ಯವಸ್ಥೆ ಮುಂತಾದ ಕಾರಣಗಳಿಗಾಗಿ ವಿಧಿಸಬಹುದಾದ ಸಮಂಜಸವಾದ ನಿರ್ಬಂಧ) ಮತ್ತು ಸಂವಿಧಾನದ 21 ನೇ ವಿಧಿ (ಯಾವುದೇ ವ್ಯಕ್ತಿಯು ಘನತೆ ಮತ್ತು ಮರ್ಯಾದೆಯಿಂದ ಬದುಕುವ ಹಕ್ಕು) ಯನ್ನು ಉಲ್ಲೇಖಿಸಿದೆ.
ಸುಬ್ರಮಣ್ಯ ಸ್ವಾಮಿ ಪ್ರಕರಣವನ್ನು ಉಲ್ಲೇಖಿಸಿದ ನ್ಯಾಯಾಲಯ, ಐಪಿಸಿ ಸೆಕ್ಷನ್ 499 ರ ಅಡಿಯಲ್ಲಿ ಕ್ರಿಮಿನಲ್ ಮಾನನಷ್ಟವನ್ನು ನಿರ್ಬಂಧಿಸುವುದು ವಾಕ್ ಸ್ವಾತಂತ್ರ್ಯದ ಉಲ್ಲಂಘನೆಯಲ್ಲ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ದ ಹೆಸರಿನಲ್ಲಿ ಮತ್ತೊಬ್ಬರ ಹಕ್ಕನ್ನು ಅಪಾಯಕ್ಕೆ ಸಿಲುಕಿಸುವಂತಿಲ್ಲ ಎಂದು ಸ್ಪಷ್ಟವಾಗಿದೆ ಎಂದು ತಿಳಿಸಿದೆ.
ದೆಹಲಿ ಹೈಕೋರ್ಟ್‌ನ 2011 SCC online Del.466 TATA Sons Ltd., V/S Green peace International and Another ಪ್ರಕರಣವನ್ನು ಉಲ್ಲೇಖಿಸಿದ ಕೋರ್ಟ್ ಪ್ರತಿವಾದಿಯು ತನಿಖಾ ಪ್ರಾಧಿಕಾರದಿಂದ ವರದಿ ಬರುವ ಮುನ್ನವೇ ನನ್ನ ವಿರುದ್ಧ ಹಲೋ ಶಿವಮೊಗ್ಗ ಪತ್ರಿಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಸಂಸದೀಯ ಪದಗಳನ್ನು ಬಳಸಿ ಆರೋಪಗಳನ್ನು ಮಾಡಿರುವುದರಿಂದ ವಾದಿಯವರ (ಎನ್. ಮಂಜುನಾಥ್) ಗೌರವಕ್ಕೆ ಚ್ಯುತಿಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ನನ್ನ ಸ್ನೇಹಿತರು, ಸಂಬಂಧಿಕರು, ಸಹ ಪತ್ರಕರ್ತರು ಮತ್ತು ಸಾರ್ವಜನಿಕರ ವಲಯದಲ್ಲಿ ನನ್ನ ನೈತಿಕ ಚಾರಿತ್ರ್ಯಕ್ಕೆ ಹಾನಿಯಾಗಿದೆ ಎಂಬುದನ್ನು ಗೌರವಾನ್ವಿತ ನ್ಯಾಯಾಲಯ ಪರಿಗಣಿಸಿದ್ದು, ಅದನ್ನು ತನ್ನ ಆದೇಶದಲ್ಲಿಯು ಉಲ್ಲೇಖಿಸಿದೆ. ಟ್ರಸ್ಟ್ ಹಣವನ್ನು ನಾನು ದುರ್ಬಳಕೆ ಮಾಡಿಕೊಂಡಿದ್ದೇನೆ ಅಥವಾ ವಂಚಿಸಿದ್ದೇನೆ ಎಂದು ತೋರಿಸಲು ಪ್ರತಿವಾದಿಯು ಯಾವುದೇ ಪೂರಕ ದಾಖಲೆಗಳನ್ನು ಒದಗಿಸಿಲ್ಲ. ಒಂದು ವೇಳೆ ಸೂಕ್ತ ವೇದಿಕೆಯಲ್ಲಿ ಆಧಾರಗಳನ್ನು ಒದಗಿಸಿದ್ದರೆ ಮಾತ್ರ ಅವರು ಸಾರ್ವಜನಿಕವಾಗಿ ಪ್ರಕಟಿಸಬಹುದಿತ್ತು. ಈ ಹಂತದಲ್ಲಿ Balance Of Convenience,Comparative Hardship ನನ್ನ ಪರವಾಗಿದೆ ಎಂದು ನ್ಯಾಯಾಲಯ ದೃಢಪಡಿಸಿದೆ.
ಆದ್ದರಿಂದ, ಸಕ್ಷಮ ಪ್ರಾಕಾರದಿಂದ ಭ್ರಷ್ಟಾಚಾರ ಅಥವಾ ವಂಚನೆ ದೃಢಪಡುವವರೆಗೆ ದಾವೆ ಇತ್ಯರ್ಥವಾಗುವ ತನಕ ಪ್ರತಿವಾದಿ ಹಲೋ ಶಿವಮೊಗ್ಗ ಸಂಪಾದಕ ಡಿ.ಜಿ. ನಾಗರಾಜ್, ಅವರ ಏಜೆಂಟರು, ಪಾಲುದಾರರು, ಸೇವಕರು, ಉದ್ಯೋಗಿಗಳು, ಪ್ರತಿನಿಧಿಗಳು ಅಥವಾ ವಕೀಲರು, ಎಲೆಕ್ಟ್ರಾನಿಕ್ ಮಾಧ್ಯಮ ಸೇರಿದಂತೆ ಯಾವುದೇ ಮಾಧ್ಯಮಗಳಲ್ಲಿ ನನ್ನ ವಿರುದ್ಧ ಮಾನನಷ್ಟ ಉಂಟು ಮಾಡುವ ಯಾವುದೇ ವಿಷಯವನ್ನು ಬರೆಯದಂತೆ, ಮಾತನಾಡದಂತೆ ಅಥವಾ ಪ್ರಕಟಿಸದಂತೆ ಕಟ್ಟುನಿಟ್ಟಿನ ತಡೆಯಾಜ್ಞೆ ನೀಡಿ ನ್ಯಾಯಾಲಯ ಆದೇಶಿಸಿದೆ.
ಈಗಾಗಲೇ ಡಿ.ಜಿ.ನಾಗರಾಜ್ ವಿರುದ್ದ ದಾಖಲಾಗಿರುವ ಪ್ರಕರಣ ಸಂಖ್ಯೆ OS 377/25 ಪ್ರಿನ್ಸಿಪಲ್ ಸೀನಿಯರ್ ಸಿವಿಲ್ ಜಡ್ಜ್ ಶಿವಮೊಗ್ಗ ನ್ಯಾಯಲಯದಲ್ಲಿ ರೂ. 10 ಲಕ್ಷ ಪರಿಹಾರ ನೀಡುವಂತೆ ದಾವೆ ಹೂಡಲಾಗಿದೆ.
