ಜೈ ಭೀಮ್ – ಜೈ ಸಂವಿಧಾನ್ ಹೆಸರಿನಲ್ಲಿ ಸಮಾವೇಶ : ಡಿಸಿಎಂ ಡಿ.ಕೆ. ಶಿವಕುಮಾರ್

Kranti Deepa

ಬೆಳಗಾವಿ,ಡಿ.25 : ಡಿ. 27 ರಂದು ನಡೆಯಲಿರುವ ಸಾರ್ವಜನಿಕ ಸಭೆಗೆ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಎಂದು ಹೆಸರಿಡಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಬೆಳಗಾವಿ ಕ್ಲಬ್ ರಸ್ತೆಯ ಸಿಪಿಇಡಿ ಶಾಲಾ ಮೈದಾನದಲ್ಲಿ ಶಿವ ಕುಮಾರ್ ಅವರು ಮಾಧ್ಯಮಗೋಷ್ಠಿ ಉದ್ದೇಶಿಸಿ ಬುಧವಾರ ಮಾತನಾಡಿದರು. ಜಗದೀಶ್ ಶೆಟ್ಟರ್ ಅವರ ಮನೆವರೆಗೂ ರತ್ನಗಂಬಳಿ ಹಾಕಿಸೋಣ. ನನ್ನ ಸಮ್ಮುಖದಲ್ಲೇ ಮುಖ್ಯಮಂತ್ರಿಗಳು ಅವರಿಗೆ ಕರೆ ಮಾಡಿ ಆಹ್ವಾನ ನೀಡಿದ್ದಾರೆ.

ಆರ್.ಅಶೋಕ್, ನಾರಾಯಣಸ್ವಾಮಿ, ಸಭಾಪತಿಗಳಿಗೆ ಆಹ್ವಾನ ನೀಡಿದ್ದಾರೆ. ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರು ಸೇರಿಸಿದ್ದೇವೆ. ಆ ಕಾರ್ಯ ಕ್ರಮ ಬಿಡಿ, ಅವರ ಸರ್ಕಾರ ಇದ್ದಾಗ ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ಅವರ ಪಾರ್ಥಿವ ಶರೀರವನ್ನು ಗೌರವಯುತವಾಗಿ ಅಂತ್ಯ ಸಂಸ್ಕಾರ ಮಾಡಲು ಅವರಿಂದ ಸಾಧ್ಯವಾಗಿಲ್ಲ.

ಅವರ ಬೀಗರಿಗೆ ಸರಿಯಾಗಿ ಅಂತ್ಯ ಸಂಸ್ಕಾರ ಮಾಡಲು ಸಾಧ್ಯವಾಗಲಿಲ್ಲವಲ್ಲ, ಅದರ ಬಗ್ಗೆ ಅವರು ಮೊದಲು ಮಾತನಾಡಲಿ. ಆಗ ಬಿಜೆಪಿ ನಾಯಕರರು ಯಾರೂ ಮಾತನಾಡಲಿಲ್ಲ. ವಿಶೇಷ ಮಿಲಿಟರಿ ವಿಮಾನದಲ್ಲಿ ಪಾರ್ಥೀವ ಶರೀರ ತಂದು ಅವರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ಮಾಡಲು ಆಗಲಿಲ್ಲ. ಆಗ ಶೆಟ್ಟರ್ ಅವರ ಬಾಯಿಗೆ ಏನಾಗಿತ್ತು” ಎಂದು ತಿರುಗೇಟು ನೀಡಿದರು.

ಗಾಂಧಿ ಮೇಲೆ ಪ್ರೀತಿ ಇದ್ದಿದ್ದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೇರಿ ಕಾರ್ಯಕ್ರಮ ಮಾಡಿದ್ದರೆ 500 ಕೋಟಿ ಖರ್ಚು ಮಾಡಲು ಸಿದ್ಧವಿದ್ದೆವು ಎಂಬ ಹೇಳಿಕೆ ಬಗ್ಗೆ ಕೇಳಿದಾಗ, ಅವರು ಈಗಲೂ ಮಾಡಲಿ. ನಾವು ಈ ಕಾರ್ಯಕ್ರಮವನ್ನು ಒಂದು ವರ್ಷಗಳ ಕಾಲ ಆಚರಣೆ ಮಾಡುತ್ತೇವೆ. ಅವರು ಕೂಡ ಈ ಕಾರ್ಯಕ್ರಮ ಮಾಡಲಿ ಎಂದು ಮಾಧ್ಯಮಗಳ ಮೂಲಕ ನಮ್ರತೆಯಿಂದ ಜನರ ಪರವಾಗಿ ಮನವಿ ಮಾಡುತ್ತೇನೆ.

ಅವರೇ ಮುಂದಾಳತ್ವ ವಹಿಸಿಕೊಂಡು ಕಾರ್ಯಕ್ರಮ ಮಾಡಲಿ, ಅವರ ಹಿಂದೆ ನಿಂತು ನಾವು ಸೇವಕರಂತೆ ಕೆಲಸ ಮಾಡುತ್ತೇವೆ ಎಂದರು.

Share This Article
";