ಜಿಲ್ಲೆಯ ಸಮಸ್ಯೆ ಪರಿಹಾರಕ್ಕೆ ಬದ್ಧ: ಶಾಂತಿ- ಸುವ್ಯವಸ್ಥೆ ಕಾಪಾಡಲು ಸಿದ್ಧ

Kranti Deepa

ಶಿವಮೊಗ್ಗ,ಜ.07  : ಜಿಲ್ಲೆಯ ಸಮಸ್ಯೆಗಳನ್ನು ಹಂತ ಹಂತವಾಗಿ ಅರ್ಥಮಾಡಿಕೊಳ್ಳುತ್ತಿದ್ದು, ಸಮಸ್ಯೆಯ ಮೂಲ ಹುಡುಕಿ ಅದು ಬೆಳೆಯದಂತೆ ಆರಂಭದಲ್ಲೇ  ಪರಿಹಾರ ಕಂಡುಹಿಡಿಯುವ ಕೆಲಸವನ್ನು ಮಾಡುವುದಾಗಿ ನೂತನ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ  ಹೇಳಿದರು.ಅವರು ಬುಧವಾರ ಪ್ರೆಸ್ ಟ್ರಸ್ಟಿನಲ್ಲಿ ತಮಗೆ ಮತ್ತು ನೂತನ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ. ಅವರಿಗೆ ಟ್ರಸ್ಟ್ ಏರ್ಪಡಿಸಿದ್ದ  ಸ್ವಾಗತ ಸಮಾರಂಭದ ಬಳಿಕ   ಪತ್ರಿಕಾ ಸಂವಾದದಲ್ಲಿ ಮಾತನಾಡಿದರು.

ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನಾವು ಕೊಡಬೇಕಿದೆ. ಯಾವುದೇ ಸಂದರ್ಭದಲ್ಲಿ ಪರಿಸ್ಥಿತಿ ಹದಗೆಡುವ ಮುನ್ನವೇ ಎಚ್ಚೆತ್ತುಕೊಳ್ಳಬೇಕಿದೆ. ಯೋಜನೆ ಅಥವಾ ಕಾರ್ಯ್ರಕದಲ್ಲಿ  ಸಾರ್ವಜನಿಕರ ಸಹಭಾಗಿತ್ವ ಇದ್ದರೆ ಮಾತ್ರ ರಚನಾತ್ಮಕ ನಿರ್ಧಾರ ತೆಗೆದುಕೊಳ್ಳಲ್ಲು ಸಾಧ್ಯವಾಗುತ್ತದೆ ಎಂದ ಅವರು , ವಿಮಾನ ನಿಲ್ದಾಣಕ್ಕೆ ಜಮೀನು ನೀಡಿದವರಿಗೆ ನ್ಯಾಯಯುತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಮಂಗನ ಕಾಯಿಲೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪರಿಸರ ಸಂರಕ್ಷಣೆ ಹಾಗೂ ಯುವಜನತೆಯ ಏಳಿಗೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಯನ್ನು ಪರಿಹರಿಸಬೇಕಿದೆ. ಈಗ ಆಗಿರುವ ಕೆಲಸ ಜೊತೆಗೆ ಮುಂದೆ ಆಗಬೇಕಿರುವ ಕೆಲಸವನ್ನು ಕೈಗೊಳ್ಳಲಾಗುವುದು ಎಂದರು.

ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಬದ್ಧ:
ನೂತನ ಜಿಲ್ಲಾ ರಕ್ಷಣಾಧಿಕಾರಿ ಬಿ. ನಿಖಿಲ್ ಮಾತನಾಡಿ, ಜಿಲ್ಲೆಯಲ್ಲಿ ತಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರು ಸನ್ನದ್ಧರಾಗಿದ್ದಾರೆ. ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿ ಜಿಲ್ಲೆಯಲ್ಲಿ ವಿಶೇಷವಾಗಿ ಅಕ್ಕ ಪಡೆಗೆ ಚಾಲನೆ ನೀಡಲಾಗುವುದು. ಗೃಹರಕ್ಷಕ ದಳದ ಸಿಬ್ಬಂದಿಯನ್ನು ಒಳಗೊಂಡ ಈ ವಿಶೇಷ ಪಡೆಯು ಹೈಸ್ಕೂಲ್ ಮತ್ತು ಕಾಲೇಜುಗಳ ಬಳಿ ನಿರಂತರ ನಿಗಾ ವಹಿಸಲಿದ್ದು, ಫೊಕ್ಸೊ ಪ್ರಕರಣಗಳನ್ನು ತಡೆಯುವುದು ಈ ಪಡೆಯ ಮುಖ್ಯ ಉದ್ದೇಶವಾಗಿದೆ ಎಂದರು.

ಜಿಲ್ಲೆಯನ್ನು ಸಂಪೂರ್ಣವಾಗಿ ನಶೆ ಮುಕ್ತ ಮಾಡುವುದೇ ಇಲಾಖೆಯ ಮುಖ್ಯ ಗುರಿ. ಅದಕ್ಕಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು. ಪೊಲೀಸರು ಸುಲಭವಾಗಿ ಲಭ್ಯವಾಗುವಂತೆ ಹೊಸ ಕಾರ್ಯಕ್ರಮವನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು. ಸುಳ್ಳು ಸುದ್ದಿಗಳ ಹರಡುವಿಕೆಯನ್ನು ತಡೆಯಲು ಬೀಟ್ ಸಿಬ್ಬಂದಿ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಮಲೆನಾಡಿನ ಬಗ್ಗೆ ತನಗೆ ಭಾವನಾತ್ಮಕ ಸಂಬಂಧವಿದೆ. ಈ ಹಿಂದೆ ಭಟ್ಕಳದಲ್ಲಿ ಸಹಾಯಕ ಪೊಲೀಸ್ ವರಿಷ್ಠನಾಗಿ ಕೆಲಸ ಮಾಡುವಾಗ ಸಾಗರ ಮತ್ತು ತೀರ್ಥಹಳ್ಳಿಗೆ ಸಾಕಷ್ಟು ಸಲ ಭೇಟಿ ಕೊಟ್ಟಿದ್ದನ್ನು ಸ್ಮರಿಸಿದ ಅವರು,  ಜಿಲ್ಲಾಡಳಿತ ಮತ್ತು ಜನರ ನಡುವೆ ಪತ್ರಕರ್ತರು ಸೇತುವೆಯಾಗಿ ಕೆಲಸ ಮಾಡಬೇಕು. ಸಂಕ್ರಾಂತಿ ಹಬ್ಬದ ನಂತರ ಜಿಲ್ಲೆಯಲ್ಲಿ ಆರಕ್ಷಕ ದಿನಾಚರಣೆ ಆಯೋಜಿಸುವ ನಿರ್ಧಾರವನ್ನು ಪ್ರಕಟಿಸಿದರು.
ವೇದಿಕೆಯಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಕಾರ್ಯದರ್ಶಿ ನಾಗರಾಜ ನೇರಿಗೆ, ಸಹಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ ಹಾಜರಿದ್ದರು.

Share This Article
";