ಶಿವಮೊಗ್ಗ ,ಸೆ.29 : ಚೆಕ್‌ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲೋ ಶಿವಮೊಗ್ಗ ಪತ್ರಿಕೆಯ ಸಂಪಾದಕ ಮತ್ತು ಪ್ರಕಾಶಕ ಡಿ.ಜಿ.ನಾಗರಾಜ್‌ಗೆ 1 ಲಕ್ಷದ 5 ಸಾವಿರ ಹಣವನ್ನು ದಂಡವಾಗಿ ಪಾವತಿಸಲು ಆದೇಶಿಸಿದ್ದು, ವಿಫಲವಾದರೆ 6 ತಿಂಗಳ ಕಾರಾಗೃಹ ಶಿಕ್ಷೆಯನ್ನು ವಿಧಿಸಿ 2 ನೇ ಪ್ರಥಮ ದರ್ಜೆ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ವಾಯ್ಸ್ ಆಫ್ ಶಿವಮೊಗ್ಗ ಪತ್ರಿಕೆಯ ಸಂಪಾದಕ ಬಿ.ಆರ್.ನಂಜುಂಡಪ್ಪ ಅವರಿಂದ ಆರೋಪಿತ ಡಿ.ಜಿ.ನಾಗರಾಜ್ 1 ಲಕ್ಷ ರೂ .ಹಣವನ್ನು ತನ್ನ ಮಗಳ ಮದುವೆ ಖರ್ಚಿಗಾಗಿ ಸಾಲ ನೀಡುವಂತೆ ಮನವಿ ಮಾಡಿದ್ದ, ಇದಕ್ಕೆ ಸ್ಪಂದಿಸಿದ ಭಂಡಿಗಡಿ ನಂಜುಂಡಪ್ಪನವರು 2020 ರ ಜನವರಿ 23 ರಂದು 95 ಸಾವಿರ ರೂ.ಗಳನ್ನು ಚೆಕ್ ನಂ.256070 ರ ಮೂಲಕ ನೀಡಿದ್ದರು . ಅಲ್ಲದೇ 5 ಸಾವಿರ ರೂ.ಹಣವನ್ನು ಕೈಗಡವಾಗಿ ಆರೋಪಿತ ನಾಗರಾಜನಿಗೆ ಸಾಲ ನೀಡಿದ್ದರು. ಈ ಸಾಲವನಒಂದು ತಿಂಗಳ ಒಳಗಾಗಿ ಮರು ಪಾವತಿ ಮಾಡುವುದಾಗಿ ಆರೋಪಿ ನಾಗರಾಜ್ ವಾಗ್ದಾನ ಮಾಡಿದ್ದ, ಅಲ್ಲದೇ ನಂಬಿಕೆಗಾಗಿ ಪ್ರನೋಟ್‌ನ್ನು ಕೂಡ ಬರೆದು ಕೊಟ್ಟಿದ್ದ.
ಕೊಟ್ಟ ಮಾತಿನಂತೆ ಅವಧಿ ಮುಗಿದ ನಂತರ ಹಣವನ್ನು ನಂಜುಂಡಪ್ಪನವರು ವಾಪಾಸ್ ಕೇಳಿದಾಗ ಆರೋಪಿತನು ತನ್ನ ಸಾಲದ ಹಣದ ಮರುಪಾವತಿ ಗಾಗಿ ಎಪಿಎಂಸಿ ಯಾರ್ಡ್ ನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ 489380 ಸಂಖ್ಯೆಯ ಚೆಕ್‌ನಲ್ಲಿ 1 ಲಕ್ಷ ರೂ.ಗಳಿಗೆ 2020 ರ ಡಿಸೆಂಬರ್ 8 ರಂದು ನಗದಾಗುವಂತೆ ಅವರಿಗೆ ನೀಡಿದ್ದ, ಸದರಿ ಚೆಕ್‌ನ್ನು ನಂಜುಂಡಪ್ಪನವರು ನಗದೀ ಕಾರಣಕ್ಕಾಗಿ ತಮ್ಮ ಖಾತೆ ಇರುವ ಯುಕೋ ಬ್ಯಾಂಕ್ಗೆ ಹಾಜರುಪಡಿಸಿದಾಗ ಬ್ಯಾಂಕ್ ನವರು ಸಾಕಷ್ಟು ಇರದ ನಿಧಿ ಎಂಬ ಹಿಂಬರಹದೊಂದಿಗೆ ಚೆಕ್‌ನ್ನು ಅಮಾನ್ಯಗೊಳಿಸಿ 2020 ರ ಡಿಸೆಂಬರ್ 10 ರಂದು ವಾಪಾಸ್ ನೀಡಿದ್ದರು.
ತದ ನಂತರ ನಂಜುಂಡಪ್ಪನವರು 2021 ರ ಜನವರಿ 5 ರಂದು ನೊಂದಾಯಿತ ಪೋಸ್ಟ್ ಮೂಲಕ ಡಿ.ಜಿ.ನಾಗರಾಜ್‌ಗೆ 15 ದಿನದ ಒಳಗೆ ಸಾಲದ ಹಣವನ್ನು ಮರುಪಾವತಿ ಮಾಡುವಂತೆ ನೋಟೀಸ್ ನೀಡಿದ್ದರು.
ಈ ಪ್ರಕರಣದ ವಿಚಾರಣೆಯನ್ನು ನಡೆಸಿದ ನ್ಯಾಯಾಧೀಶರು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಆರೋಪಿತನು ಪಡೆದ ಹಣವನ್ನು ಮರುಪಾವತಿ ಮಾಡಿರುವುದಿಲ್ಲ ಎಂಬುದು ನಿಸ್ಸಂಶಯವಾಗಿ ಸಾಬೀತಾಗಿದೆ ಎಂದು ದೃಢಪಡಿಸಿದ್ದಾರೆ. ಆದ್ದರಿಂದ ಆರೋಪಿತನ ವಿರುದ್ಧವಾಗಿ (ನಿಪಿ 1 ರಿಂದ 32 ದಾಖಲೆಗಳು ಸಾಬೀತಾಗಿದೆ.) ವರ್ಗಾವಣೆ ಲಿಖಿತ ದಾಖಲೆಗಳ ಅಧಿನಿಯಮ 1878 ಕಲಂ 138 ರ ಅಡಿಯಲ್ಲಿ ಅಪರಾಧ ಎಸಗಿರುವುದು ಋಜುವಾತಾಗಿದೆ.
ಆದ್ದರಿಂದ ನಾಗರಾಜನು ಭಂಡಿಗಡಿ ನಂಜುಂಡಪ್ಪನವರಿಗೆ 1.05 ಲಕ್ಷ ಹಣವನ್ನು ದಂಡವಾಗಿ ಪಾವತಿಸಲು ಆದೇಶಿಸಿದೆ. ಒಂದು ವೇಳೆ ನಾಗರಾಜ್ ದಂಡದ ಮೊತ್ತವನ್ನು ಪಾವತಿಸಲು ವಿಫಲನಾದರೆ 6 ತಿಂಗಳ ಕಾರಾಗೃಹ ಶಿಕ್ಷೆಯನ್ನು ಅನುಭವಿಸತಕ್ಕದ್ದು ಎಂದು ನ್ಯಾಯಾಽಶರಾದ ಎನ್.ಕೆ.ಸಿದ್ದರಾಜು ಸೆಪ್ಟೆಂಬರ್ 9 ರ ತೀರ್ಪಿನಲ್ಲಿ ಆದೇಶಿಸಿದ್ದಾರೆ.
ಭಂಡಿಗಡಿ ನಂಜುಂಡಪ್ಪನವರ ಪರವಾಗಿ ಹಿರಿಯ ನ್ಯಾಯವಾದಿ ಶ್ರೀಪಾದ್ ವಾದಿಸಿದರು.