ನವದೆಹಲಿ,ಡಿ.11 : ಶರಾವತಿ ಜಲವಿದ್ಯುತ್ ಯೋಜನೆಯ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಆಗ್ರಹಿಸಿದರು.
ಸಂತ್ರಸ್ತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಲೋಕಸಭೆಯಲ್ಲಿ ಬುಧವಾರ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ಅವರು, ಈ ಜಲ ವಿದ್ಯುತ್ ಯೋಜನೆ 1958- 1964 ರ ನಡುವೆ ನಿರ್ಮಾಣವಾಗಿತ್ತು.
ಯೋಜನೆಗಾಗಿ ಸಾವಿರಾರು ಎಕರೆ ಭೂಸ್ವಾನ ಮಾಡಲಾಗಿತ್ತು. ನಾಲ್ಕೈದು ಸಾವಿರ ಕುಟುಂಬಗಳ ಜಾಗ ಮುಳುಗಡೆ ಆಗಿದೆ. ಈ ಯೋಜನೆಯಿಂದ ಇಡೀ ದೇಶಕ್ಕೆ ವಿದ್ಯುತ್ ಸಿಕ್ಕಿದೆ. ಆದರೆ, ಸಂತ್ರಸ್ತರು ಈಗಲೂ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ ಎಂದು ಗಮನ ಸೆಳೆದರು.
‘ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ಬರುವ ಮುನ್ನ ರೈತರಿಗೆ ಭೂಮಿ ಕೊಡುವ ಪ್ರಯತ್ನವನ್ನು ಹಿಂದಿನ ಸರ್ಕಾರಗಳು ಮಾಡಿಲ್ಲ. ಇಲ್ಲಿನ ಜನರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸವಲತ್ತುಗಳು ಸಿಗುತ್ತಿಲ್ಲ. ಸ್ವಂತ ಮನೆ ಕಟ್ಟಲು ಆಗುತ್ತಿಲ್ಲ. ಬ್ಯಾಂಕ್ ಸಾಲ ಸಿಗುತ್ತಿಲ್ಲ. ಸಂತ್ರಸ್ತರಿಗೆ ಪುನವರ್ಸತಿ ಕಲ್ಪಿಸಲು 9,136 ಎಕರೆ ಅರಣ್ಯ ಪ್ರದೇಶವನ್ನು ಬಳಸುವ ಪ್ರಸ್ತಾವನೆ ಯನ್ನು ಹಿಂದಿನ ಸರ್ಕಾರ ಕಳುಹಿಸಿತ್ತು.
ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರ ಪ್ರಮಾಣಪತ್ರ ಸಲ್ಲಿಸಿದೆ. ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವುದಾಗಿ ಎರಡೂ ಸರ್ಕಾರಗಳು ಡಿಸೆಂಬರ್ 3 ರಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿವೆ.