ರಾಜ್ಯಾಧ್ಯಕ್ಷನಾಗಿ ಮುಂದುವರೆಯುವ ವಿಶ್ವಾಸ ಶಿವಮೊಗ್ಗದಲ್ಲಿ ಬಿ.ವೈ. ವಿಜಯೇಂದ್ರ ಹೇಳಿಕೆ

Kranti Deepa

ಶಿವಮೊಗ್ಗ: ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರ ಚುನಾವಣೆ 8-10 ದಿನದಲ್ಲಿ ನಡೆಯಲಿದ್ದು, ತಾವೇ ಚುನಾವಣೆಯಲ್ಲಿ ಗೆದ್ದು ರಾಜ್ಯಾಧ್ಯಕ್ಷರಾಗಿ ಮುಂದುವರೆಯುವ ವಿಶ್ವಾಸವನ್ನು ಬಿಜೆಪಿಯ ಹಾಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, “8-10 ದಿನದಲ್ಲಿ ರಾಜ್ಯಾಧ್ಯಕ್ಷರ ಚುನಾವಣೆ ನಡೆದು ಎಲ್ಲ ಗೊಂದಲಗಳಿಗೆ ತೆರೆ ಬೀಳಲಿದೆ. ಭಾರತೀಯ ಜನತಾ ಪಾರ್ಟಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಭವಿಷ್ಯ ಯಾವುದೇ ಒಂದು ರಾಜಕೀಯ ಪಕ್ಷದಲ್ಲಿ ಇಷ್ಟೊಂದು ವ್ಯವಸ್ಥಿತವಾಗಿ ಸಂಘಟನೆಯ ಚುನಾವಣೆ ನಡೆಯುವುದು ಬಿಜೆಪಿಯಲ್ಲಿ ಮಾತ್ರ. “ಮಂಡಲ, ಜಿಲ್ಲಾ, ರಾಜ್ಯಾಧ್ಯಕ್ಷರ ಹಾಗೂ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ಎಲ್ಲವು ಸಹ ವ್ಯವಸ್ಥಿತವಾಗಿ ನಮ್ಮ ಕೇಂದ್ರೀಯ ವರಿಷ್ಠರು ನಿರ್ಧಾರ ಮಾಡಿದಂತೆ ನಡೆಯುತ್ತದೆ.

ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ನಮ್ಮ ಪಕ್ಷದ ಹಿರಿಯರು, ಕಾರ್ಯಕರ್ತರು ಒಟ್ಟಾಗಿ ಈ ಭ್ರಷ್ಟ, ದುಷ್ಟ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೇವೆ. ನನ್ನ ಕಳೆದ ಒಂದು ವರ್ಷದ ಅವಧಿ ನಾನು ಯಾವ ರೀತಿಯಲ್ಲಿ ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆಂದು ರಾಜ್ಯದ ಜನತೆಗೆ, ಕಾರ್ಯಕರ್ತರಿಗೆ, ನಮ್ಮ ಪಕ್ಷದ ಹಿರಿಯರಿಗೆ, ಶಾಸಕರಿಗೆ ತಿಳಿದಿದೆ. ನನಗೆ ಸಂಪೂರ್ಣವಾಗಿ ವಿಶ್ವಾಸವಿದೆ. ಪಕ್ಷದ ಅಧ್ಯಕ್ಷನಾಗಿ ಮುಂದುವರೆಯುತ್ತನೆ” ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯಾಧ್ಯಕ್ಷರ ಚುನಾವಣೆಗೆ ಪೈಪೋಟಿ ಇದೆ: “ಈ ಬಾರಿಯ ಜಿಲ್ಲಾಧ್ಯಕ್ಷರ ಚುನಾವಣೆಯಲ್ಲಿ ಹೆಚ್ಚಿನ ಪೈಪೋಟಿ ಇತ್ತು. ಅದೇ ರೀತಿ ರಾಜ್ಯಾಧ್ಯಕ್ಷರ ಚುನಾವಣೆಗೂ ಸಹ ಪಕ್ಷದ ಹಿರಿಯರು ಅವರ ಅಪೇಕ್ಷೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಎಲ್ಲವನ್ನು ಪಕ್ಷದ ವರಿಷ್ಠರು ಗಮನಿಸುತ್ತಿದ್ದಾರೆ, ಎಲ್ಲವೂ ಒಳ್ಳೆಯದಾಗುತ್ತದೆ. ಸುಖಾಂತ್ಯವಾಗುತ್ತದೆ ಎಂಬ ನಂಬಿಕೆ ಇದೆ” ಎಂದರು.

“ಪಕ್ಷಕ್ಕೆ ಈಗಾಗಲೇ ಸಾಕಷ್ಟು ಡ್ಯಾಮೇಜ್ ಆಗಿದೆ. 8-10 ದಿನದಲ್ಲಿ ರಾಜ್ಯಾಧ್ಯಕ್ಷರ ಚುನಾವಣೆ ಇದೆ. ಆಗ ಎಲ್ಲಾ ಸರಿ ಹೋಗುತ್ತದೆ” ಎಂದು ಉತ್ತರಿಸಿದರು.

ನಾನು ಯಾರ ವಿರುದ್ಧ ಬಹಿರಂಗ ಹೇಳಿಕೆ ನೀಡಿಲ್ಲ:

“ನಾನು ಕಳೆದ ಒಂದು ವರ್ಷದಿಂದ ಯಾರ ವಿರುದ್ಧ ಹಾಗೂ ಪಕ್ಷದ ವಿರುದ್ಧ ಹೇಳಿಕೆ ನೀಡಿಲ್ಲ. ಹಾಗಾಗಿ ರಾಜ್ಯಾಧ್ಯಕ್ಷನಾಗಿ ನನ್ನ ಕರ್ತವ್ಯದ ಅರಿವು ಇದೆ. ದೊಡ್ಡ ಜವಾಬ್ದಾರಿಯನ್ನು ಬಹಳ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದೇನೆ. ಹೀಗಾಗಿ ೧-೮ ದಿನದಲ್ಲಿ ರಾಜ್ಯಾಧ್ಯಕ್ಷರು ಯಾರು ಅಂತ ಉತ್ತರ ಸಿಗುತ್ತದೆ. ತದನಂತರ ಎಲ್ಲದಕ್ಕೂ ಉತ್ತರ ಸಿಗುತ್ತದೆ” ಎಂದರು.
ಈ ವೇಳೆ ಎಂಎಲ್ಸಿಗಳಾದ ಡಿ.ಎಸ್ ಅರುಣ್ ಹಾಗೂ ಡಾ|| ಧನಂಜಯ್ ಸರ್ಜಿ ಹಾಜರಿದ್ದರು.

Share This Article
";