ಬೆಂಗಳೂರು,ಅ.22 : ಕೆಂಗೇರಿ ಕೆರೆಗೆ ಬಿದ್ದು ನಾಪತ್ತೆಯಾಗಿದ್ದ ಅಣ್ಣ-ತಂಗಿಯ ಮೃತದೇಹಗಳು ಪತ್ತೆಯಾ ಗಿವೆ. ಕೆಂಗೇರಿ ಕೆರೆ ಪಕ್ಕದ ಬಡಾವಣೆಯಲ್ಲಿ ವಾಸವಾಗಿರುವ ನಾಗಮ್ಮ ಎಂಬುವರ ಮಕ್ಕಳು ಕೆಂಗೇರಿ ಕೆರೆ ನೀರು ತರಲು ಹೋಗಿದ್ದರು. ಆ ವೇಳೆ ಅಣ್ಣ ಶ್ರೀನಿವಾಸ್ (13 ) ತಂಗಿ ಮಹಾ ಲಕ್ಷ್ಮೀ (11 ) ಕೆರೆಗೆ ಬಿದ್ದಿದ್ದರು.
ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ಸಿಬ್ಬಂದಿ ರಬ್ಬರ್ ಬೋಟ್ ಮೂಲಕ ಶೋಧ ಕಾರ್ಯ ನಡೆಸಿದ್ದು, ಮೊದಲಿಗೆ ಅಣ್ಣ ಶ್ರೀನಿವಾಸ್ ಮೃತದೇಹ ಸಿಕ್ಕಿದೆ. ಇದೀಗ ಮಹಾಲಕ್ಷ್ಮೀ ಮೃತದೇಹ ಪತ್ತೆಯಾಗಿದೆ.
ನಾಗಮ್ಮ ಬಿಬಿಎಂಪಿಯಲ್ಲಿ ಕಸ ವಿಂಗಡಣೆ ಕೆಲಸ ಮಾಡುತ್ತಿದ್ದಾರೆ.
ನಾಗಮ್ಮ ತನ್ನ ಇಬ್ಬರು ಮಕ್ಕಳು ಮತ್ತು ಸಹೋದರಿ ಧನಲಕ್ಷ್ಮೀ ಜೊತೆಗೆ ವಾಸವಾಗಿದ್ದಾರೆ. ಇದೀಗ ತನ್ನಿಬ್ಬರು ಮಕ್ಕಳನ್ನು ಕಳೆದುಕೊಂಡಿರುವ ನಾಗಮ್ಮನ ರೋಧನೆ ಮುಗಿಲು ಮುಟ್ಟಿದ್ದು, ನೆರೆದಿದ್ದ ಜನರ ಕಣ್ಣಾಲಿಗಳಲ್ಲಿ ನೀರು ತರಿಸಿತು.
ಜ್ಞಾನಭಾರತಿ ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಕೆಂಗೇರಿ ಪೊಲೀಸ್ ಸಿಬ್ಬಂದಿ, ಸಿವಿಲ್ ಡಿಫೆನ್ಸ್ ಸೇರಿದಂತೆ ಸುಮಾರು ೧೫ ಜನರ ತಂಡ ಶೋಧ ಕಾರ್ಯ ನಡೆಸಿ ಎರಡು ಮೃತದೇಹಗಳನ್ನು ಪತ್ತೆ ಮಾಡಿದೆ.