ರೈತರ ಸಮಸ್ಯೆ ಪರಿಹರಿಸಿ: ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ

Kranti Deepa

ಶಿವಮೊಗ್ಗ, ನ.28  : ಜಿಲ್ಲೆಯ ವಿವಿಧ ತಾಲ್ಲೂಕುಗಳ ರೈತರು ಎದುರಿಸುತ್ತಿರುವ ದೈನಂದಿನ ಮತ್ತು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇವುಗಳ ಪರಿಹಾರಕ್ಕೆ  ಆಗ್ರಹಿಸಿ ಶುಕ್ರವರ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಕೃಷಿ ಪಂಪ್‌ಸೆಟ್‌ಗಳಿಗೆ ಅನಿಯಮಿತ ಮತ್ತು ಕಳಪೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುತ್ತಿರುವುದರಿಂದ  ಅಥವಾ ಲೋ-ವೋಲೋಜ್‌ನಿಂದ ಪಂಪ್‌ಸೆಟ್‌ಗಳು ಸುಡುವುದು ಸಾಮಾನ್ಯವಾಗಿದೆ. ಕೃಷಿಗೆ ನಿಗದಿತ ಸಮಯದಲ್ಲಿ (ಕನಿಷ್ಠ 7 ಗಂಟೆ) ಮತ್ತು ಗುಣಮಟ್ಟದ -ಫೇಸ್ ವಿದ್ಯುತ್ ಪೂರೈಕೆ ಮಾಡಲು ಎಸ್ಕಾಂಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಕೆರೆ, ಕಟ್ಟೆಗಳ ಹೂಳೆತ್ತುವ ಕೆಲಸವನ್ನು ಕೂಡಲೇ ಆರಂಭಿಸಬೇಕು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಹಳದಿ ಎಲೆ ರೋಗ ಮತ್ತು ಕೊಳೆ ರೋಗದ ಹಾವಳಿ ಹೆಚ್ಚಾಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೋಗಗ್ರಸ್ತ ಬೆಳೆಗಳ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ (ನಷ್ಟ ಪರಿಹಾರ) ಮತ್ತು ರೋಗ ನಿಯಂತ್ರಣಕ್ಕೆ ವೈಜ್ಞಾನಿಕ ತಾಂತ್ರಿಕ ನೆರವು ನೀಡಬೇಕು. ರೋಗನಿರೋಧಕ ಅಡಿಕೆ ತಳಿಗಳ ಅಭಿವೃದ್ಧಿಗೆ ಒತ್ತು ನೀಡಬೇಕು.ಮುಖ್ಯ ಬೆಳೆಗಳಾದ ಭತ್ತ, ಜೋಳ, ರಾಗಿಗೆ ಕನಿಷ್ಠ ಬೆಂಬಲ ಬೆಲೆ ಸಮರ್ಪಕವಾಗಿ ಸಿಗುತ್ತಿಲ್ಲ. ವಿಮಾ ಕಂಪನಿಗಳಿಗೆ ತ್ವರಿತವಾಗಿ ಮತ್ತು ಪಾರದರ್ಶಕವಾಗಿ ಪರಿಹಾರ ವಿತರಿಸಲು ಆದೇಶ ನೀಡಬೇಕು. ಸರ್ಕಾರದ ಕನಿಷ್ಠ ಬೆಂಬಲ ಬೆಲೆಯಡಿ ರೈತರಿಂದ ಧಾನ್ಯಗಳನ್ನು ಖರೀದಿಸಲು ಸೂಕ್ತ ವ್ಯವಸ್ಥೆ ಮತ್ತು ಖರೀದಿ ಕೇಂದ್ರಗಳನ್ನು ಹೆಚ್ಚಿಸಬೇಕು.

ಮಲೆನಾಡು ಭಾಗಗಳಲ್ಲಿ ಕಾಡಾನೆ, ಹಂದಿ ಮತ್ತು ಇತರೆ ವನ್ಯಜೀವಿಗಳ ಹಾವಳಿಯಿಂದ ಬೆಳೆ ಹಾನಿಯಾಗುವುದು ಹೆಚ್ಚಿದೆ. ಇದಕ್ಕೆ ಪರಿಹಾರ ವಿತರಣೆ ಕಷ್ಟ ಮತ್ತು ವಿಳಂಬವಾಗುತ್ತಿದೆ. ಅರಣ್ಯ ಇಲಾಖೆ ವತಿಯಿಂದ ರೈತರ ಜಮೀನುಗಳ ಸುತ್ತ ತಡೆಗೋಡೆ ಅಥವಾ ಸೌರ ಬೇಲಿ ನಿರ್ಮಾಣಕ್ಕೆ ಸಹಾಯ ನೀಡಬೇಕು ಮತ್ತು ಬೆಳೆ ಹಾನಿ ಪರಿಹಾರವನ್ನು ತ್ವರಿತವಾಗಿ ವಿತರಿಸಬೇಕು.
ಜಿಲ್ಲೆ ಒಳಗೆ ಮೆಕ್ಕೆಜೋಳ ಬೆಳೆದಂತ ರೈತರಿಗೆ ಸರಿಯಾದ ಬೆಂಬಲ ಬೆಲೆ ಸಿಗುತ್ತಿಲ್ಲ ಕೇಂದ್ರ ಸರ್ಕಾರ 2,400 ನಿಗದಿ ಮಾಡಿದ್ದಾಗಿಯೂ ಕೂಡ ಮಾರುಕಟ್ಟೆಯಲ್ಲಿ 1,700  ರಿಂದ 1,500 ರೂಪಾಯಿ ದರ ಇದೆ, ಅದನ್ನ ಬೆಂಬಲ ಬೆಲೆ ಯೋಜನೆ ಅಡಿ ಖರೀದಿ ಮಾಡಬೇಕು ಆವರ್ತನಿಧಿಯನ್ನ ಅದಕ್ಕೆ ಕೊಟ್ಟು ಮಾರುಕಟ್ಟೆಯಲ್ಲಿ ಮೆಕ್ಕೆಜೋಳಕ್ಕೆ ಖರೀದಿ ಕೇಂದ್ರವನ್ನು ತೆರೆಯಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ರೈತ ಮೋರ್ಛಾ ಅಧ್ಯಕ್ಷ ಸಿದ್ದಲಿಂಗಪ್ಪ, ಪ್ರ. ಕಾರ್ಯದರ್ಶಿಗಳಾದ  ಕುಮಾರ್ ನಾಯ್ಡು, ಗಣೇಶ್ ಬಿಳಕಿ ಮೊದಲಾದವರಿದ್ದರು.

Share This Article
";