ಶಿವಮೊಗ್ಗ, ಅ.01: ಜಿಲ್ಲಾ ಭಾರತೀಯ ಜನತಾ ಪಕ್ಷ ರೈತ ಮೋರ್ಚಾ ನೇತೃತ್ವದಲ್ಲಿ ನಗರದ ಗೋಪಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರಂತರ ರೈತ ವಿರೋಧಿ ನೀತಿ ಖಂಡಿಸಿ ಹಾಗೂ ಬಗರ್ ಹುಕುಂ ಸಾಗುವಳಿದಾರರಿಗೆ ನೀಡುತ್ತಿರುವ ಅನಗತ್ಯ ಕಿರುಕುಳ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಬಂದ ದಿನದಿಂದ ಬಿಜೆಪಿ ಅವಧಿಯಲ್ಲಿ ಜಾರಿಗೆ ತಂದಿದ್ದ ರೈತ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ “ರೈತ ವಿದ್ಯಾನಿಧಿ” ಯೋಜನೆ, ರಾಜ್ಯ ಸರ್ಕಾರ ಪಾಲಿನ “ಕಿಸಾನ್ ಸಮ್ಮಾನ್” ಯೋಜನೆ ನಿಲುಗಡೆ ಸೇರಿದಂತೆ ಅನೇಕ ರೈತಪರ ಯೋಜನೆಗಳನ್ನು ನಿಲ್ಲಿಸಲಾಗಿದೆ. ರೈತರ ಹೊಲಗಳಿಗೆ ನೀರುಣಿಸಲು ಅಗತ್ಯವಾಗಿ ಬೇಕಿರುವ ಪಂಪ್ ಸೆಟ್ ಅಳವಡಿಕೆಗೆ ಹಿಂದಿಗಿಂತಲೂ ಶೇಕಡಾ 500 ರಷ್ಟು ಅಧಿಕ ಹಣ ನೀಡಬೇಕಾಗಿದೆ. ಹೈನುಗಾರಿಕೆ ಪ್ರೋತ್ಸಾಹಿಸಲು ಹಾಲಿಗೆ ನೀಡುತ್ತಿದ್ದ ಪ್ರೋತ್ಸಾಹ ಧನ ಅನೇಕ ದಿನಗಳಿಂದ ಬಾಕಿ ಉಳಿಸಿಕೊಂಡಿದೆ ಎಂದು ಪ್ರತಿಭಟನಾಕಾರರು ದೂರಿದರು.
ಅನೇಕ ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ರೈತರ ಜಮೀನುಗಳನ್ನು ವಶಕ್ಕೆ ಪಡೆಯಲು ತಯಾರಿ ನಡೆಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿಯೂ ಅನೇಕ ರೈತರ ಹೊಲಗಳಲ್ಲಿ ಬೆಳೆದ ಬೆಳೆಗಳನ್ನು ಅರಣ್ಯ ಇಲಾಖೆ ನಾಶಪಡಿಪಡಿಸಿದೆ. ಬಿತ್ತನೆ ಬೀಜದ ಬೆಲೆ ಏರಿಕೆ, ಯೂರಿಯಾ ಗೊಬ್ಬರ ವಿತರಣೆಯಲ್ಲಿ ಆಗುತ್ತಿರುವ ವಿಳಂಬ, ಅತಿವೃಷ್ಟಿ – ಅನಾವೃಷ್ಟಿಯಿಂದ ಆಗಿದ್ದ ಬೆಳೆ ನಾಶಕ್ಕೆ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದ ಅನುದಾನ ದುರ್ಬಳಕೆ ಸೇರಿದಂತೆ ಇನ್ನೂ ಅನೇಕ ರೈತ ವಿರೋಧಿ ಬೆಳವಣಿಗೆಗಳಿಂದ ರೈತರಿಗೆ ಆಗುತ್ತಿರುವ ಅನ್ಯಾಯಕ್ಕೆ ಸೂಕ್ತ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಜಿಲ್ಲಾಧ್ಯಕ್ಷ ಜಗದೀಶ್, ಶಾಸಕರಾದ ಆರಗ ಜ್ಞಾನೇಂದ್ರ, ಚನ್ನಬಸಪ್ಪ, ಡಾ|| ಧನಂಜಯ ಸರ್ಜಿ, ಅರುಣ್, ಮಾಜಿ ಶಾಸಕ ಹರತಾಳು ಹಾಲಪ್ಪ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ ಸೇರಿದಂತೆ ಅನೇಕ ಮುಖಂಡರು, ಹಿರಿಯರು, ಗಣ್ಯರು ಉಪಸ್ಥಿತರಿದ್ದರು.