ಶಿವಮೊಗ್ಗ : ಭಾರತದ ಸಂವಿಧಾನಕ್ಕೆ ವಿರೋಧವಾಗಿರುವ ಕರ್ನಾಟಕ ದ್ವೇಷಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ-2025 ನ್ನು ರಾಜ್ಯ ಸರ್ಕಾರ ಜಾರಿಗೊಳಿಸಲು ಮುಂದಾಗಿರುವುದನ್ನು ಭಾರತೀಯ ಜನತಾಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ವಾಗ್ಧಾಳಿ ನಡೆಸಿದರು.
ಅವರು ಇಂದು ನಗರದ ಶಿವಪ್ಪನಾಯಕ ವೃತ್ತದಲ್ಲಿ ಜಿಲ್ಲಾ ಬಿಜೆಪಿ ಆಯೋಜಿಸಿದ್ದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಈ ವಿಧೇಯಕವು ನಾಗರೀಕರ ಮೂಲ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಸಂವಿಧಾನದ ಪರಿಚ್ಛೇದ 19(1), ಮತ್ತು 2 ರ ಪರಿಚ್ಛೇದದಡಿ ವಾಕ್ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ. ಡಾ.ಬಿ.ಆರ್.ಅಂಬೇಡ್ಕರ್‌ರವರು ಸಂವಿಧಾನದಡಿ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಂಗ್ರೆಸ್ ಸರಕಾರ ಕಿತ್ತುಕೊಳ್ಳುತ್ತಿದೆ ಎಂದು ಹರಿಹಾಯ್ದರು.
ಸರಕಾರದ ವಿರುದ್ಧ ಮಾತನಾಡುವವರ ಬಾಯಿಮುಚ್ಚಿಸುವ ಸಾಧನವಾದ ಈ ವಿಧೇಯಕದಲ್ಲಿ ದ್ವೇಷ ಭಾಷಣಕ್ಕೆ ನೀಡಿರುವ ವ್ಯಾಖ್ಯಾನವೇ ಅಸ್ಪಷ್ಟವಾಗಿದೆ. ಸರಕಾರದ ನೀತಿ-ನಿಯಮಗಳ ವಿರುದ್ಧ ಟೀಕೆ ಮಾಡುವುದು, ಸಾಮಾಜಿಕ ಚರ್ಚೆ, ವ್ಯಂಗ್ಯವಾಡುವುದು ಅಥವಾ ಸತ್ಯವನ್ನು ಹೇಳುವುದನ್ನು ದ್ವೇಷ ಎಂದು ಪರಿಗಣಿಸುವ ಅಪಾಯ ಈ ವಿಧೇಯಕದಲ್ಲಿದೆ. ಇದು ಪ್ರಜಾಪ್ರಭುತ್ವದ ಕತ್ತು ಇಸುಕುವ ಯತ್ನವಾಗಿದೆ ಎಂದು ಟೀಕಿಸಿದರು.
ಈ ಕಾನೂನು ಪೊಲೀಸರಿಗೆ ಮತ್ತು ಸರಕಾರಕ್ಕೆ ನಿರಂಕುಶ ಅಧಿಕಾರ ನೀಡುವುದಾಗಿದೆ. ಜನಸಾಮಾನ್ಯರನ್ನು ಅಪಾರಾಧಿಗಳನ್ನಾಗಿ ಮಾಡುವ ಈ ಕೀಳುಮಟ್ಟದ ಕಾಯ್ದೆ ನಮಗೆ ಬೇಕೆ ? ಎಂದು ಪ್ರಶ್ನಿಸಿದ ಅವರು, ತುಂಗಾನದಿ ತಟದಲ್ಲಿ ಮುಸ್ಲಿಂರು ಬಾಂಬ್‌ಬ್ಲಾಸ್ಟ್ ಮಾಡಿದ್ದನ್ನು ಪ್ರಸ್ತಾಪಿಸಿದರೆ ದ್ವೇಷಭಾಷಣವಾಗುತ್ತದೆಯೇ ಎಂದ ಅವರು, ಈ ಹಿಂದೆ ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ತುರ್ತುಪರಿಸ್ಥಿತಿ ಹೇರುವುದರ ಮೂಲಕ ಮಾಧ್ಯಮದವರನ್ನು ನಿಯಂತ್ರಿಸುವ ದುಸ್ಸಾಹಸಕ್ಕೆ ಕೈಹಾಕಿದ್ದರು. ಗಾಂಧಿಬಜಾರ್‌ನಲ್ಲಿ ವ್ಯಾಪಾರಸ್ಥರು ಸಣ್ಣ-ಪುಟ್ಟ ವಿಷಯಗಳಿಗೆ ತಗಾದೆ ತೆಗೆದುಕೊಂಡು ಜಗಳವಾಡಿದರೂ ಅವರ ವಿರುದ್ಧ ದ್ವೇಷಭಾಷನದ ಪ್ರಕರಣ ದಾಖಲಾಗುತ್ತದೆ. ಈ ವಿಧೇಯಕದಿಂದ ಸಮಾಜದಲ್ಲಿರುವವರೆಲ್ಲರೂ ತೊಂದರೆಗೆ ಸಿಲುಕಿಕೊಳ್ಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾಮಾಜಿಕ ಸಾಮರಸ್ಯದ ಹೆಸರಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಮೂಲಕ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲಾಗುತ್ತಿದೆ. ಬಿಜೆಪಿಯ ಸಾಮಾಜಿಕ ಜಾಲತಾಣದ ೩೫ಜನರ ಮೇಲೆ ಈಗಾಗಲೇ ಪ್ರಕರಣ ದಾಖಲಿಸಿದ್ದಾರೆ. ಎಂಎಲ್‌ಎ-ಎಂಎಲ್‌ಸಿಯವರ ಮೇಲೂ ಕೇಸ್ ಹಾಕುತ್ತಿದ್ದಾರೆ. ತಕ್ಷಣ ಈ ಕಾನೂನನ್ನು ವಾಪಾಸ್ಸು ಪಡೆಯಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾಜಿ ಎಂಎಲ್‌ಎ ಅಶೋಕ್‌ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ನಗರಾಧ್ಯಕ್ಷ ಮೋಹನ್‌ರೆಡ್ಡಿ ಪ್ರಮುಖರಾದ ನಾಗರಾಜ್, ಜ್ಞಾನೇಶ್ವರ್, ಸುರೇಶ್, ಮಾಲತೇಶ್, ದೀನ್‌ದಯಾಳ್, ಸುರೇಖಾ ಮುರಳೀಧರ್, ಶಾಂತಾಸುರೇಂದ್ರ, ರಶ್ಮೀ ಶ್ರೀನಿವಾಸ್, ಕೆ.ವಿ. ಅಣ್ಣಪ್ಪ, ಬಳ್ಳೇಕೆರೆ ಸಂತೋಷ್, ವಿಶ್ವನಾಥ್, ಹರೀಶ್ ನಾಯ್ಕ ಮೊದಲಾದವರಿದ್ದರು.
