ಶಿವಮೊಗ್ಗ,ಜ.25 : ರಾಜ್ಯ ಸರ್ಕಾರದ ಜಾತಿಗಣತಿಯಿಂದ ಅನೇಕ ಜಾತಿಗಳಿಗೆ ಅನ್ಯಾಯವಾಗಿದ್ದು, ಈ ಮೂಲಕ ಕಾಂಗ್ರೆಸ್ ಸರ್ಕಾರ ಹಿಂದೂ ಸಮಾಜವನ್ನು ಉಪ ಜಾತಿಗಳಾಗಿ ವಿಂಗಡಿಸಿ, ಒಡೆಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು. ನಗರದ ಆಲ್ಕೊಳ ಬಡಾವಣೆಯಲ್ಲಿ ಆಲ್ ಇಂಡಿಯಾ ಭಾವಸಾರ ಕ್ಷತ್ರಿಯ ಮಹಾಸಭಾ ವತಿಯಿಂದ ನೂತನವಾಗಿ ನಿರ್ಮಿಸಿರುವ ಭಾವಸಾರ ಸಂಸ್ಕೃತಿ ಭವನವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರದಿಂದ ಅಧಿಕೃತ ಜನಗಣತಿ ಪ್ರಕ್ರಿಯೆ ಆರಂಭವಾಗಲಿದ್ದು, ಸಾರ್ವಜನಿಕರು ತಮ್ಮ ಜಾತಿ ಮತ್ತು ಧರ್ಮ (ಹಿಂದೂ) ದಾಖಲಿಸುವಲ್ಲಿ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ದೇಶ ಕಟ್ಟುವ ಕೆಲಸದಲ್ಲಿ ನಮ್ಮ ಭಾವಸಾರ ಕ್ಷತ್ರಿಯ ಸಮಾಜ ಕೆಲಸ ಮಾಡುತ್ತಾ ಬಂದಿದೆ. ಸ್ವಾತಂತ್ರ್ಯ ಸಂಗ್ರಾಮ, ತುರ್ತು ಪರಿಸ್ಥಿತಿ ಸೇರಿದಂತೆ ಹಲವು ಹೋರಾಟಗಳಲ್ಲಿ ಭಾವಸಾರರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮುಂದೆಯೂ ಸಹ ದೇಶ ಮತ್ತು ಹಿಂದುತ್ವದ ಮುಂದೆ ಹಲವು ಸವಾಲುಗಳಿವೆ. ಈ ದಿಕ್ಕಿನಲ್ಲಿ ನಾವೆಲ್ಲ ಒಂದಾಗಿ ಹೋರಾಡಬೇಕಿದೆ ಎಂದರು.
ಜಿಲ್ಲೆ ವೈದ್ಯಕೀಯ ಕಾಲೇಜು, ಕೃಷಿ ಮತ್ತು ತೋಟಗಾರಿಕೆ ಸಂಯೋಜಿತ ವಿಶ್ವವಿದ್ಯಾಲಯ, ಆಯುರ್ವೇದಿಕ್ ಕಾಲೇಜು, ಪಶುವೈದ್ಯಕೀಯ ಕಾಲೇಜು ಹಾಗೂ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಕ್ಯಾಂಪಸ್ ಹೊಂದಿರುವ ಪ್ರಮುಖ ಶೈಕ್ಷಣೀಕ ಕೇಂದ್ರವಾಗಿ ಮಾರ್ಪಟ್ಟಿದೆ. ವಿಮಾನದ ಮೂಲಕ ದೇಶದ ಪ್ರಮುಖ ಸ್ಥಳಗಳಿಗೆ ಸಂಪರ್ಕ ಹೊಂದಿದೆ ಎಂದರು.
ಭಾರತದಲ್ಲಿರುಷ್ಟು ಧರ್ಮ ಸಹಿಷ್ಣುತೆ ಬೇರೆ ಯಾವ ದೇಶದಲ್ಲಿಯೂ ಇಲ್ಲ. ನಮ್ಮಲ್ಲಿ ಎಲ್ಲ ಧರ್ಮದವರಿಗೂ ಸಮಾನ ರಕ್ಷಣೆ ಮತ್ತು ಗೌರವ ಸಿಗುತ್ತಿದೆ. ಆದರೆ ಬೇರೆ ದೇಶಗಳಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲವಾಗಿದೆ ಎಂದರು. ಭಾವಸಾರ ಕ್ಷತ್ರಿಯ ಸಮಾಜವು ದೇಶ ಕಟ್ಟುವ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸಿದೆ. ನಗರದಲ್ಲಿ ಸಮಾಜದ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಸೂಡಾ ಪ್ರಾಕಾರದ ಮೂಲಕ ಸಿಎ ಸೈಟ್ ಪಡೆಯಲು ಅರ್ಜಿ ಸಲ್ಲಿಸಿ. ಶಿಕ್ಷಣ ಸಂಸ್ಥೆ ಅಗತ್ಯವಿರುವ ಎಲ್ಲ ಸರಕಾರಿ ಸಹಕಾರ ನೀಡುತ್ತೇನೆ ಎಂದರು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಯಾವುದೆ ಅರ್ಜಿ ಅಥವಾ ಮನವಿ ಸಲ್ಲಿಸದಿದ್ದರೂ, ಸಮಾಜದ ಅಗತ್ಯತೆ ಅರಿತು ಅಭಿವೃದ್ಧಿ ಕಾರ್ಯಗಳು, ಮಠ-ಮಾನ್ಯಗಳಿಗೆ ಸ್ಪಂದಿಸಿದ್ದಾರೆ ಎಂದರು.
ಭಾವಸಾರರಿಗೆ ಶಾಲೆ ತೆರೆಯಲು ಉತ್ತಮ ಜಾಗದ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ತಾವು ಸಹಕಾರ ನೀಡುವುದಾಗಿ ಭರವಸೆ ನೀಡಿದರಲ್ಲದೇ, ತಾವು ಭಾವಸಾರ ಸಮುದಾಯದವರ ಜೊತೆ ಸದಾ ಇದ್ದೆನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಎಐಬಿಕೆಎಂ ಅಧ್ಯಕ್ಷ ಸುರೇಶ್ ಬೇದ್ರೆ, ಎಐಬಿಕೆ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಡಾ. ರಾಜು ಬಿ.ಜವಳ್ಕರ್, ರಾಜ್ಯಾಧ್ಯಕ್ಷ ಶ್ರೀನಿವಾಸ್ ರಾವ್ ಪಿಸ್ಸೆ, ಉಪಾಧ್ಯಕ್ಷರಾದ ಓಂಪ್ರಕಾಶ್ ತೇಲ್ಕರ್, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್. ಅರುಣ್, ಡಾ.ಧನಂಜಯ ಸರ್ಜಿ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾದ್ಯಕ್ಷ ಸಿ.ಎಸ್. ಷಡಾಕ್ಷರಿ, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಮುಖಂಡರಾದ ಸತ್ಯನಾರಾಯಣ, ಗಜೇಂದ್ರನಾಥ್ ಮಾಳೋದೆ, ಕೆ.ಟಿ. ಶ್ರೀನಿವಾಸ್, ವಿಜಯಕುಮಾರ್, ವಿನಾಯಕ್ ಡಿ.ಎನ್., ರಾಕೇಶ್ ಸಾಕ್ರೆ, ಪ್ರಭಾಕರ್, ಸೇರಿದಂತೆ ಮತ್ತಿತರರಿದ್ದರು.
