ಶಿವಮೊಗ್ಗ , ಫೆ. 12 : ‘ಭದ್ರಾವತಿಯಲ್ಲಿ ಅರಣ್ಯ ಕಬಳಿಕೆ, ಮರಳು, ಇಸ್ಪೀಟ್ ಹಾಗೂ ಗಾಂಜಾ ಮಾಫಿಯಾಗಳಿವೆ. ಶಾಸಕರ ಬೆಂಬಲಿತರೇ ಈ ಮಾಫಿಯಾಗಳಲ್ಲಿದ್ದಾರೆ. ಅಧಿಕಾರಿಗಳು ಶಾಸಕರ ಚೇಲಾಗಳಾಗಿದ್ದಾರೆ’ ಎಂದು ಭದ್ರಾವತಿ ಜೆಡಿಎಸ್ ಪಕ್ಷದ ನಾಯಕಿ ಶಾರದಾ ಅಪ್ಪಾಜಿಗೌಡ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿz ಅವರು, ಶಾಸಕರು ನಾಮಕಾವಸ್ತೆಯಾಗಿದ್ದಾರೆ. ಅವರ ಇಬ್ಬರು ಮಕ್ಕಳೇ ಆಳ್ವಿಕೆ ಮಾಡುತ್ತಿದ್ದಾರೆ. ಅಧಿಕಾರಿಗಳಿಗೆ ಏನಾದರೂ ದೂರು ಕೊಟ್ಟರೆ, ಎಂಎಲ್‌ಎ ಮನೆಗೆ ಹೋಗಿ ಬನ್ನಿ ಅಥವಾ ಅವರ ಮಕ್ಕಳನ್ನು ಮಾತಾಡಿಸಿಕೊಂಡು ಬನ್ನಿ ಎಂದು ಹೇಳಿ ಕಳುಹಿಸುತ್ತಾರೆ. ಶಾಸಕರು ಎಲ್ಲಿಯೂ ಕಾಣಿಸುವುದಿಲ್ಲ. ಮಕ್ಕಳು, ಅಣ್ಣತಮ್ಮಂದಿರೇ ಎಲ್ಲ ಕಡೆ ಕಾಣಿಸಿಕೊಳ್ಳುತ್ತಾರೆ. ಶಿಷ್ಟಾಚಾರ ಕಣ್ಮರೆಯಾಗಿದೆ. ಬಡವರ ಪರ ಇವರು ಯಾವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಅಧಿಕಾರಿಗಳನ್ನು ಶಾಸಕರ ಮನೆಗೆ ಕರೆಯಿಸಿಕೊಂಡು ಕೆಲಸ ಮಾಡಿಸಲಾಗುತ್ತಿದೆ. ಅವರ ಮನೆಯಲ್ಲಿ ಅಧಿಕಾರಿಗಳು ಕೆಲಸ ಮಾಡುವುದಾದರೆ, ಕಚೇರಿಗಳು ಏಕೆ ಬೇಕು? ಎಂದು ಪ್ರಶ್ನಿಸಿದ ಶಾರದಾ ಅಪ್ಪಾಜಿಗೌಡ ಅವರು, ‘ಭದ್ರಾವತಿಯಲ್ಲಿ ಭಾರೀ ಅವ್ಯವಹಾರ ನಡೆಯುತ್ತಿದೆ’. ದೊಡ್ಡೇರಿ ಭಾಗದಲ್ಲಿ 15 ಎಕರೆ ಅರಣ್ಯ ನಾಶ ಮಾಡಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಅರಣ್ಯ ಇಲಾಖೆ ವಾಚರ್ ಅನ್ನು ಕೂಡಿ ಹಾಕಿ ಹೊಡೆಯಲಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ, ಭದ್ರಾವತಿಯಲ್ಲಿ ಅರಣ್ಯವೇ ಉಳಿಯುವುದಿಲ್ಲ ಎಂದು ತಿಳಿಸಿದರು.
ಭದ್ರಾವತಿಯಲ್ಲಿ ಇಸ್ಪೀಟ್, ಜೂಜು ಅವ್ಯಾಹತವಾಗಿದೆ. ವಿವಿಧೆಡೆ ಶಿಫ್ಟ್ ಪ್ರಕಾರ ಜೂಜಾಟ ನಡೆಸಲಾಗುತ್ತಿದೆ. ದಾಳಿ ಮಾಡುತ್ತಿರುವ ಬಗ್ಗೆ ಅಧಿಕಾರಿಗಳೇ ಮಾಫಿಯಾಗಳಿಗೆ ಮೆಸೇಜ್ ರವಾನಿಸುತ್ತಾರೆ. ಸ್ಥಳದಿಂದ ಹೋಗುವಂತೆ ಸೂಚಿಸುತ್ತಿದ್ದಾರೆ ಎಂದರು.
ಯುವ ಜಾ.ಜನತಾದಳ ಜಿಲ್ಲಾಧ್ಯಕ್ಷ ಮುಖಂಡ ಮಧುಕುಮಾರ್ ಮಾತನಾಡಿ, ಶಾಸಕರ ಪುತ್ರರೇ ಭದ್ರಾವತಿಯಲ್ಲಿ ಇಸ್ಪೀಟ್ ದಂಧೆ ನಡೆಸುತ್ತಿದ್ದಾರೆ. ಹುಬ್ಬಳ್ಳಿ, ನೆಲಮಂಗಲ, ಚಿತ್ರದುರ್ಗ ಮೊದಲಾದ ಕಡೆಯಿಂದ ಭದ್ರಾವತಿಗೆ ಇಸ್ಪೀಟ್ ಜೂಜಾಡಲು ಬರುತ್ತಿದ್ದಾರೆ. ಭದ್ರಾವತಿಯಲ್ಲಿ ಗೋವಾದ ರೀತಿ ಕ್ಯಾಸಿನೋ ಮಾಡಿಬಿಡಲಿ.
ಅಕ್ರಮಗಳನ್ನು ಪ್ರಶ್ನಿಸುವವರ ವಿರುದ್ದ ಅಟ್ರಾಸಿಟಿ ಕೇಸ್ ಸೇರಿದಂತೆ ಸುಳ್ಳು ದೂರುಗಳನ್ನು ದಾಖಲಿಸಲಾಗುತ್ತಿದೆ. ರಾಜ್ಯ ಸರ್ಕಾರ ತಕ್ಷಣವೇ ಭದ್ರಾವತಿಯಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ನಗರಾಧ್ಯಕ್ಷ ದೀಪಕ್ ಸಿಂಗ್ ಸೇರಿದಂತೆ ಹಲವು ನಾಯಕರಿದ್ದರು.
ಭದ್ರಾವತಿ ರಿಪಬ್ಲಿಕ್ ಆಗಲು ಬಿಡಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಈ ಹಿಂದೆ ಹೇಳಿದ್ದರು. ಅವರ ಹೇಳಿಕೆ ನಂತರ ಹೆಚ್ಚೆಚ್ಚು ಅಕ್ರಮಗಳು ನಡೆಯುತ್ತಿವೆ. ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣದ ನಿಜವಾದ ತನಿಖೆ ಆಗಬೇಕು. ಫೆ. 14 ರಂದು ಭದ್ರಾವತಿ ಪಟ್ಟಣದಲ್ಲಿ ಜೆಡಿಎಸ್ ನಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
– ಮಾಜಿ ಶಾಸಕ ಕೆ ಬಿ ಪ್ರಸನ್ನಕುಮಾರ್