ಶಿವಮೊಗ್ಗ : ಹಾಡಹಗಲೇ ರೌಡಿಯ ಬರ್ಬರ ಕೊಲೆ

Kranti Deepa

ಶಿವಮೊಗ್ಗ ನ. 30 : ಹಾಡಹಗಲೇ ರೌಡಿಶೀಟರ್ ಓರ್ವನನ್ನು ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ, ಶಿವಮೊಗ್ಗ ನಗರದ ಹೊರವಲಯ ಬೊಮ್ಮನಕಟ್ಟೆ ಬಡಾವಣೆಯಲ್ಲಿ ನ.30  ರ ಶನಿವಾರ ಮಧ್ಯಾಹ್ನ ನಡೆದಿದೆ.

ರಾಜೇಶ್ ಶೆಟ್ಟಿ (38 ) ಕೊಲೆಗೀಡಾದ ರೌಡಿ ಶೀಟರ್ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಸೇರಿದಂತೆ ವಿನೋಬನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಲಭ್ಯ ಮಾಹಿತಿ ಅನುಸಾರ ಹಳೇ ಬೊಮ್ಮನಕಟ್ಟೆ ಮುಖ್ಯರಸ್ತೆಯ ಮಾರಮ್ಮನಗುಡಿ ಸಮೀಪದ ಗ್ಯಾರೇಜ್ ಬಳಿ ಮಧ್ಯಾಹ್ನ ೧ ಗಂಟೆ ಸುಮಾರಿಗೆ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ದುಷ್ಕರ್ಮಿಗಳ ದಾಳಿಯಿಂದ ರಾಜೇಶ್ ಶೆಟ್ಟಿಯು ಸ್ಥಳದಲ್ಲೇ ಅಸುನೀಗಿದ್ದಾನೆ ಎನ್ನಲಾಗಿದೆ. ರಾಜೇಶ್ ಶೆಟ್ಟಿಯು ವಿನೋಬ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ ಶೀಟರ್ ಆಗಿದ್ದಾನೆ. ಈತನ ವಿರುದ್ದ ಆರೇಳು ಪ್ರಕರಣಗಳಿವೆ. ಸದ್ಯ ಆಟೋ ಚಾಲನೆ, ರಿಯಲ್ ಎಸ್ಟೇಟ್ ಬ್ರೋಕರ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸುತ್ತವೆ.

ವೈಯಕ್ತಿಕ ವೈಷಮ್ಯದ ಹಿನ್ನೆಲೆಯಲ್ಲಿ ಎದುರಾಳಿ ತಂಡವೊಂದು ಕೊಲೆ ಮಾಡಿದೆ ಎನ್ನಲಾಗಿದ್ದು, ಹತ್ಯೆಗೆ ಕಾರಣವೇನು ಎಂಬುದರ ಬಗ್ಗೆ ಹೆಚ್ಚಿನ ವಿವರಗಳು ಇನ್ನಷ್ಟು ಲಭ್ಯವಾಗಬೇಕಾಗಿದೆ.

Share This Article
";