ಶಿವಮೊಗ್ಗ: ಬೆಳಗಾವಿ ಅಧಿವೇಶನದಲ್ಲಿ ಶಾಸಕ ಡಿ.ಎಸ್ ಅರುಣ್ ಅವರು ಪವಿತ್ರ ಆಜಾನ್ ಕುರಿತು ಹಗುರವಾಗಿ ಮಾತನಾಡಿರುವುದು ಅಲ್ಪಸಂಖ್ಯಾತ ಸಮುದಾಯಕ್ಕೆ ಮಾತ್ರವಲ್ಲ, ಧಾರ್ಮಿಕ ಸಹಿಷ್ಣುತೆಯನ್ನು ನಂಬುವ ಎಲ್ಲ ಸರ್ವಧರ್ಮೀಯ ನಾಗರಿಕರಿಗೆ ನೋವುಂಟುಮಾಡಿದೆ ಎಂದು ಶಿವಮೊಗ್ಗ ಸಿಟಿ ಸೌತ್ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕಲೀಂ ಪಾಷಾ ಬೇಸರ ವ್ಯಕ್ತಪಡಿಸಿದರು.
ಆಜಾನ್ ಎಂದರೆ ಕೇವಲ ಮಸೀದಿಯಿಂದ ಕೇಳಿಬರುವ ಧ್ವನಿ ಅಲ್ಲ. ಅದು ಇಸ್ಲಾಂ ಧರ್ಮದಲ್ಲಿ ಮಾನವನನ್ನು ದೇವರ ಸ್ಮರಣೆಯತ್ತ ಆಹ್ವಾನಿಸುವ ಪವಿತ್ರ ಪ್ರಾರ್ಥನಾ ಕರೆ. ಆಜಾನ್ ಮತ್ತು ನಮಾಜ್ ಪ್ರಾರ್ಥನೆಗಳು ದೇವರನ್ನು ಓಲೈಸಲು ಹೊರತು ಮನುಷ್ಯರನ್ನು ತೋರಿಸಲು, ಯಾರನ್ನಾದರೂ ಅವಮಾನಿಸಲು ಅಥವಾ ತೊಂದರೆಗೊಳಿಸಲು ಅಲ್ಲ. ಅದು ಆತ್ಮಶುದ್ಧಿ, ವಿನಮ್ರತೆ ಮತ್ತು ಶಾಂತಿಯ ಸಂಕೇತವಾಗಿದೆ ಎಂದು ತಿಳಿಸಿದ್ದಾರೆ.
ಇಸ್ಲಾಮಿನಲ್ಲಿ ಮಾತ್ರವಲ್ಲ, ಸನಾತನ (ಹಿಂದೂ) ಧರ್ಮ, ಕ್ರೈಸ್ತ ಧರ್ಮ, ಸಿಖ್ ಧರ್ಮ ಸೇರಿದಂತೆ ಎಲ್ಲಾ ಧರ್ಮಗಳಲ್ಲೂ ದೇವರನ್ನು ಆರಾಧಿಸುವುದು ಮಾನವ ಕುಲದ ಕಲ್ಯಾಣಕ್ಕಾಗಿ, ಪ್ರಕೃತಿಯ ಸಮತೋಲನಕ್ಕಾಗಿ ಮತ್ತು ಸಮಾಜದಲ್ಲಿ ಶಾಂತಿ, ಸಹೋದರತ್ವ ಉಳಿಯಲೆಂಬ ಉದ್ದೇಶದಿಂದಲೇ ನಡೆಯುತ್ತದೆ. ದೇವರ ಆರಾಧನೆಯ ಮೂಲ ಉದ್ದೇಶ ಮಾನವನನ್ನು ಅಹಂಕಾರದಿಂದ ದೂರಮಾಡಿ, ಮಾನವೀಯತೆಯತ್ತ ಕರೆದೊಯ್ಯುವುದಾಗಿದೆ. ಆಜಾನ್‌ನಲ್ಲಿ ಕೇಳಿಬರುವ “ಅಲ್ಲಾಹ್ ಅತಿದೊಡ್ಡವನು” ಎಂಬ ಘೋಷಣೆ ಈ ಜಗತ್ತಿನ ಎಲ್ಲ ಶಕ್ತಿಗಳಿಗಿಂತ ಸತ್ಯ, ನ್ಯಾಯ ಮತ್ತು ಮಾನವೀಯ ಮೌಲ್ಯಗಳೇ ಶ್ರೇಷ್ಠವೆಂಬ ಸಂದೇಶವನ್ನು ಸಾರುತ್ತದೆ. “ನಮಾಜ್ ಕಡೆಗೆ ಬನ್ನಿ, ಯಶಸ್ಸಿನ ಕಡೆಗೆ ಬನ್ನಿ” ಎಂಬ ಕರೆ ಮಾನವನನ್ನು ಶಾಂತಿ, ಶಿಸ್ತು ಮತ್ತು ನೈತಿಕ ಜೀವನದತ್ತ ಆಹ್ವಾನಿಸುತ್ತದೆ ಎಂದು ತಿಳಿಸಿದ್ದಾರೆ.
ಫಜ್ರ್ ಆಜಾನ್‌ನಲ್ಲಿರುವ “ನಮಾಜ್ ನಿದ್ರೆಯಿಗಿಂತ ಶ್ರೇಷ್ಠ” ಎಂಬ ವಾಕ್ಯ ಜೀವನದಲ್ಲಿ ಜಾಗೃತತೆ, ಹೊಣೆಗಾರಿಕೆ ಮತ್ತು ಆತ್ಮಜ್ಞಾನವನ್ನು ಬೆಳೆಸುವ ಸಂದೇಶ ಎಂದು ತಿಳಿಸಿದ್ದಾರೆ.
ಇಂತಹ ಪವಿತ್ರ, ಆಧ್ಯಾತ್ಮಿಕ ಮತ್ತು ಮಾನವೀಯ ಅರ್ಥ ಹೊಂದಿರುವ ಆಜಾನ್ ಕುರಿತು ಸಾರ್ವಜನಿಕ ವೇದಿಕೆಗಳಲ್ಲಿ ಹಗುರವಾಗಿ ಅಥವಾ ಅಸಮರ್ಪಕವಾಗಿ ಮಾತನಾಡುವುದು ಸಂವಿಧಾನದಾತ್ಮಕ ಮೌಲ್ಯಗಳು ಮತ್ತು ಸರ್ವಧರ್ಮ ಸಮಭಾವದ ತತ್ವಗಳಿಗೆ ವಿರುದ್ಧವಾಗಿದೆ. ಭಾರತ ಒಂದು ಸರ್ವಧರ್ಮ ಸಮಭಾವದ ದೇಶವಾಗಿದ್ದು, ಇಲ್ಲಿ ಪ್ರತಿಯೊಂದು ಧರ್ಮದ ನಂಬಿಕೆ, ಪ್ರಾರ್ಥನೆ ಮತ್ತು ಆಚರಣೆಗಳಿಗೆ ಗೌರವ ನೀಡುವುದು ನಮ್ಮೆಲ್ಲರ ಕರ್ತವ್ಯ. ಯಾವ ಧರ್ಮವನ್ನು ಗೌರವಪೂರ್ವಕವಾಗಿ ಕಾಣಲಾಗುತ್ತದೋ, ಆ ಧರ್ಮದ ಅನುಯಾಯಿಗಳೂ ಸಮಾಜದಲ್ಲಿ ಅದೇ ರೀತಿಯ ಗೌರವವನ್ನು ಮರಳಿ ನೀಡುತ್ತಾರೆ. ಪರಸ್ಪರ ಗೌರವ, ಸಹಿಷ್ಣುತೆ ಮತ್ತು ಸಂವೇದನೆ ಇರುವಾಗಲೇ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಸಾಧ್ಯ. ನಾವು ಈ ಮೂಲಕ ಸಾರ್ವಜನಿಕ ಜೀವನದಲ್ಲಿರುವ ಎಲ್ಲರೂ ತಮ್ಮ ಮಾತುಗಳಲ್ಲಿ ಹೆಚ್ಚಿನ ಜವಾಬ್ದಾರಿ, ಸಂಯಮ ಮತ್ತು ಸಂವೇದನೆ ವಹಿಸಬೇಕು ಎಂದು ಆಗ್ರಹಿಸುತ್ತೇವೆ. ಧರ್ಮವನ್ನು ವ್ಯಂಗ್ಯಕ್ಕಾಗಲಿ, ರಾಜಕೀಯ ಲಾಭಕ್ಕಾಗಲಿ ಬಳಸದೆ, ಶಾಂತಿ, ಸೌಹಾರ್ದತೆ ಮತ್ತು ಮಾನವೀಯತೆಯ ಸಂದೇಶವನ್ನು ಉಳಿಸಿಕೊಳ್ಳುವುದು ತುರ್ತಿದೆ ಎಂದು ತಿಳಿಸಿದ್ದಾರೆ.
