ಇಂಜಿನಿಯರಿಂಗ್‌ನಲ್ಲಿ ಕಲಿಕೆಗೆ ವಿಫುಲ ಅವಕಾಶ

Kranti Deepa
ಶಿವಮೊಗ್ಗ,ಅ.05 :ಇಂಜಿನಿಯರಿಂಗ್ ತಾಂತ್ರಿಕ ಶಿಕ್ಷಣವು ವಿದ್ಯಾರ್ಥಿ ಸಮೂಹದಲ್ಲಿ ಸೃಷ್ಟಿಸುವ ಪ್ರಾಯೋಗಿಕ ಚಾಣಾಕ್ಷತನ, ಚಾಕಚಕ್ಯತೆ ಮತ್ತು ನವ ನವೀನ ರೀತಿಯಲ್ಲಿ ಉದ್ಭವಿಸುವ ಸಮಸ್ಯೆ ಗಳಿಗೆ ಪರಿಹಾರಗಳನ್ನು ಕಾರ್ಯಗತರೂಪಕ್ಕೆ ತರುವ ಮನಸ್ಥಿತಿಯನ್ನು ತ್ವರಿತ ಗತಿಯಲ್ಲಿ ಸೃಷ್ಟಿಸುವ ಕಾರ್ಯತತ್ಪರತೆಯ ಬಗ್ಗೆ ಪ್ರಯತ್ನಿಸಬೇಕೆಂದು   ಬೆಳಗಾವಿಯ ವಿಶ್ವೇ ಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಪ್ರೊ. ಬಿ ಇ ರಂಗಸ್ವಾಮಿ ನುಡಿದರು.
ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನ ೧೮ನೇ ಬ್ಯಾಚ್ ನ ಪ್ರಥಮ ವರ್ಷದ ಇಂಜಿನಿಯರಿಂಗ್ ಕೋರ್ಸ್ ನ ಶಿಷ್ಯೋಪನಯನ ಪ್ರಾರಂಭೋತ್ಸವ ಉದ್ಘಾಟಿಸಿ ಮಾತನಾಡಿದರು.
ಪ್ರಸಕ್ತ ಕಾಲಘಟ್ಟದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಇಂಟರ್ನೆಟ್ ಕ್ಷೇತ್ರದ ಹಾನಿಕಾರಕ ತಂತ್ರಜ್ಞಾನಗಳ ವಿಷವರ್ತುಲದಲ್ಲಿ ಸಿಲುಕಿಕೊಂಡು ಶೈಕ್ಷಣಿಕವಾಗಿ ಉನ್ನತ ಮಟ್ಟದಲ್ಲಿ ಸಾಧನೆಗಳನ್ನು ಮಾಡುವ ಪ್ರಯತ್ನಗಳ ಕಡೆಗೆ ಗಮನ ಹರಿಸುವುದನ್ನು ಕಡಿಮೆ ಮಾಡಿರುವುದು ಉತ್ತಮವಾದ ಬೆಳವಣಿಗೆಯಲ್ಲ. ದೇಶದಲ್ಲಿ ಕೇಂದ್ರ ಸರ್ಕಾರವು ಕಾರ್ಯಗತರೂಪಕ್ಕೆ ತಂದ ಮೇಡ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಆತ್ಮ ನಿರ್ಭರ ಭಾರತ ಈ ಬಗೆಯ ಹಲವು ವಿನೂತನ ಪರಿಕಲ್ಪನೆಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡು ದೇಶದ ಹಾಗೂ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಬೇಕೆಂದು ಸೂಚಿಸಿದರು.
ಪಿಇಎಸ್ ಟ್ರಸ್ಟ್ ನ ಮುಖ್ಯ ಆಡಳಿತ ಸಂಯೋಜನಾಕಾರಿ ಪ್ರೊ.. ನಾಗರಾಜ ಆರ್. ಮಾತನಾಡಿ,  ಪಿಇಎಸ್ ಟ್ರಸ್ಟ್ ನ ಜನನ, ನಡೆದು ಬಂದ ಹಾದಿ ಹಾಗೂ ವಿದ್ಯಾರ್ಥಿಗಳು ಅಸಾಧಾರಣ ಸಾಧನೆಯನ್ನು ಮಾಡಲು ಹಲವು ಬಗೆಯ ವ್ಯಕ್ತಿತ್ವಗಳು ತಮ್ಮದೇ ಆದ ಪಾತ್ರವನ್ನು ನಿರ್ವಹಿಸಲಿವೆ ಎಂದು ನುಡಿದರು.
ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಪ್ರಾಂಶುಪಾಲ ಪ್ರೊ.  ಯುವರಾಜು ಬಿ ಎನ್  ಸ್ವಾಗತಿಸಿ,  ಕಾಲೇಜಿನ ೧೮ ವರ್ಷಗಳ  ಪಯಣದ ವಿಶ್ಲೇಷಣಾತ್ಮಕ ವರದಿ ಯನ್ನು ನೀಡಿದರು.
ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಪ್ರಸನ್ನಕುಮಾರ್ ಹೆಚ್ ಆರ್ ವಂದಿಸಿದರು. ಆರ್ಟಿಫಿಶಿಯಲ್ ಇಂಟಿಲಿಜನ್ಸ್ ಮತ್ತು ಮಷೀನ್ ಲರ್ನಿಂಗ್ ವಿಭಾಗದ ಮುಖ್ಯಸ್ಥ ಪ್ರೊ. ಲೈಕ್ವಿನ್ ಥಾಮಸ್ ನಿರೂಪಿಸಿದರು.

Share This Article
";