ರಾಜಬೀದಿ ಉತ್ಸವಕ್ಕೆ ಸಕಲ ಸಿದ್ಧತೆ

Kranti Deepa
ಶಿವಮೊಗ್ಗ, ಸೆ.05 :  ಶನಿವಾರ ನಡೆಯಲಿರುವ ಹಿಂದು ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಂಡಿವೆ.
 ಮೆರವಣಿಗೆ ಸಾಗುವ ಮಾರ್ಗಗಳನ್ನು ವಿವಿಧ ರೀತಿಯಲ್ಲಿ ಅಲಂಕರಿಸಲಾಗಿದೆ. ಗಾಂಧಿ ಬಜಾರ್‌ನಲ್ಲಿ ’ಸಮುದ್ರ ಮಂಥನ’ದ ಕಲಾಕೃತಿಯನ್ನು ರಚಿಸಲಾಗಿದ್ದು, ಶಿವಪ್ಪ ನಾಯಕರ ಮೂರ್ತಿಯನ್ನು ವಿಶೇಷವಾಗಿ ಸಿಂಗರಿಸಲಾಗಿದೆ.  ಧರ್ಮಸ್ಥಳ ದೇವಾಲಯದ ರೀತಿಯಲ್ಲಿ ಮಹಾದ್ವಾರವನ್ನು ನಿರ್ಮಿಸಲಾಗಿದೆ. ಗೋಪಿ ಸರ್ಕಲ್‌ನ ಆರಂಭದಲ್ಲಿ ’ಆಪರೇಷನ್ ಸಿಂಧೂರ್’ ಅನ್ನು ನೆನಪಿಸುವ ಮಹಾದ್ವಾರವನ್ನು ನಿರ್ಮಿಸಲಾಗಿದೆ. ಸೀನಪ್ಪ ಶೆಟ್ಟಿ ಸರ್ಕಲ್‌ನಲ್ಲಿಯೂ ವಿಶೇಷ ಅಲಂಕಾರಗಳು ಮತ್ತು ನಾಳಿನ ಗಣಪತಿ ಮೆರವಣಿಗೆ ಸ್ವಾಗತಕ್ಕೆ ಸಿದ್ಧತೆ ನಡೆದಿದೆ.
ಬಹುತೇಕ ವೃತ್ತಗಳಲ್ಲಿ ಹಿಂದೂ ಮಹಾಸಭಾ ಗಣಪ ಮೆರವಣಿಗೆಗೆ ಸ್ವಾಗತ ಕೋರುವ ಪ್ಲೆಕ್ಸ್ ಹಾಕಲಾಗಿದ್ದು ವಿವಿಧ ಮುಖಂಡರು ಶುಭ ಹಾರೈಸಿದ್ದಾರೆ. ಮೆರವಣಿಗೆಯ ಭೀಮೇಶ್ವರ ದೇವಸ್ಥಾನದಿಂದ ಆರಂಭವಾಗಿ, ಎನ್ ಪಿಎ ಮುಖ್ಯ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ, ಎಸ್.ಎನ್. ಸರ್ಕಲ್, ಎ.ಎ. ಸರ್ಕಲ್, ನೆಹರು ರಸ್ತೆ, ಗೋಪಿ ಸರ್ಕಲ್, ದುರ್ಗಿಗುಡಿ, ಮಹಾವೀರ ಸರ್ಕಲ್, ಡಿ.ವಿ.ಎಸ್ ಸರ್ಕಲ್, ಕಾನ್ವೆಂಟ್ ರಸ್ತೆ, ಮತ್ತು ಕೋಟೆ ರಸ್ತೆ ಮಾರ್ಗವಾಗಿ ಸಾಗಿ ಭೀಮೇಶ್ವರ ದೇವಸ್ಥಾನದ ಬಳಿಯ ತುಂಗಾ ನದಿಯಲ್ಲಿ ವಿಸರ್ಜನೆಗೊಳ್ಳಲಿದೆಮೆರವಣಿಗೆ ಸಾಗುವ ಈ ಮಾರ್ಗದಲ್ಲಿ ಮತ್ತು ಸುತ್ತಮುತ್ತಲಿನ ೧೦೦ ಮೀಟರ್ ಅಂತರದಲ್ಲಿ ವಾಹನ ಸಂಚಾರ ಮತ್ತು ನಿಲುಗಡೆ ಸಂಪೂರ್ಣ ನಿಷೇಧಿಸಲಾಗಿದೆ.
 ರಾಜಬೀದಿ ಉತ್ಸವದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ೫ರ ಸಂಜೆ ೬ ಗಂಟೆಯಿಂದ ಸೆಪ್ಟೆಂಬರ್ 7ರ ಬೆಳಗ್ಗೆ 6 ಗಂಟೆ ಯವರೆಗೆ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಮತ್ತು ಸಾಗಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ.ಮೆರವಣಿಗೆ ಶಾಂತಿಯುತವಾಗಿ ನಡೆಯಲು ಪೊಲೀಸ್ ಇಲಾಖೆಯು ಅನೇಕ ಮುನ್ನೆಚ್ಚರಿಕೆಗಳನ್ನು ಕೈಗೊಂಡಿದೆ ಎಂದು ಎಸ್ಪಿ ಜಿ.ಕೆ. ಮಿಥುನ್ ಕುಮಾರ್ ತಿಳಿಸಿದ್ದಾರೆ.
ಬಿಗಿ ಬಂದೋಬಸ್ತ್
ಮೆರವಣಿಗೆ ಸಾಗುವ ರಸ್ತೆಗಳನ್ನು ಈಗಾಗಲೇ ಎರಡು ಬಾರಿ ಪರಿಶೀಲಿಸಲಾಗಿದೆ. ಮೆಸ್ಕಾಂ ಮತ್ತು ಮಹಾನಗರ ಪಾಲಿಕೆಯ ಸಹಕಾರದೊಂದಿಗೆ ಕೆಳಮಟ್ಟದಲ್ಲಿದ್ದ ವಿದ್ಯುತ್ ಕೇಬಲ್‌ಗಳು ಹಾಗೂ ಬೀಳಬಹುದಾಗಿದ್ದ ಮರಗಳನ್ನು ತೆರವುಗೊಳಿಸಲಾಗಿದೆ. ಮೆರವಣಿಗೆಯ ಶಾಂತಿಯುತ ನಿರ್ವಹಣೆಗಾಗಿ 5,000 ಪೊಲೀಸರನ್ನು ನಿಯೋಜಿಸಲಾಗಿದ್ದು, ಅವರು ಎರಡು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಆರ್.ಎ.ಎಫ್, ಎಸ್.ಎ.ಎಫ್, ಕೆ.ಎಸ್.ಆರ್. ಪಿ ಮತ್ತು ಡಿ.ಎ.ಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. ರಾಜ್ಯದ ಬೇರೆ ಜಿಲ್ಲೆಗಳಿಂದಲೂ ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ನಗರದಲ್ಲಿ 1,000 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ೧೦೯ ರೌಡಿ ಶೀಟರ್‌ಗಳನ್ನು ಗಡಿಪಾರು ಮಾಡಲಾಗಿದೆ.
– ಎಸ್ಪಿ ಮಿಥುನ್‌ಕುಮಾರ್ ಜಿ.ಕೆ

Share This Article
";