ಕಷ್ಟವಾದರೂ ಪ್ರಯತ್ನದ ಮೂಲಕ ಗುರಿ ತಲುಪಿ : ನಟಿ ಪ್ರೇಮಾ ಕರೆ

Kranti Deepa

ಶಿವಮೊಗ್ಗ,ಜ.25  : ನಮ್ಮ ಗುರಿಯನ್ನು ಎಷ್ಟೇ ಕಷ್ಟವಾದರೂ ಸತತ ಪ್ರಯತ್ನದ ಮೂಲಕ ತಲುಪಬೇಕು. ಎಲ್ಲಿ ವಿಫಲವಾಗುತ್ತೇವೆಯೋ ಅಲ್ಲಿಯೇ ಸಾಧನೆ ಮುಂದುವರೆಸಬೇಕು. ಇದರಿಂದ ಅಸಾಧ್ಯವಾದುದು ಒಂದಲ್ಲ ಒಂದು ದಿನ ಸಾಧ್ಯವಾಗುತ್ತದೆ ಎಂದು ಚಿತ್ರ ನಟಿ ಪ್ರೇಮಾ ಹೇಳಿದರು.

ನಗರದ ಕನ್ನಡ ಮೀಡಿಯಂ 24 X 7 ಚಾನೆಲ್ ಕೊಡಮಾಡುವ  ‘ಕದಂಬ ಅವಾರ್ಡ್ ಆಫ್ ಎಕ್ಸಲೆನ್ಸ್-2026 ’ನ್ನು 13 ಸಾಧಕರಿಗೆ ಪ್ರದಾನ ಮಾಡಿ ಅವರು ಮಾತನಾಡಿದರು.
ಚಾನೆಲ್‌ಗಳು ಒಳ್ಳೆಯ ಸಂದೇಶವನ್ನು ಸಮಾಜಕ್ಕೆ ಕೊಡಬೇಕು. ಬಿತ್ತರಿಸುವ ವರದಿ ಸಕಾರಾತ್ಮಕವಾಗಿರಬೇಕು. ಸುದ್ದಿಯನ್ನು ಮತ್ತೆ ನೋಡಬೇಕೆನ್ನಿಸುವ  ಹಾಗಿರಬೇಕು. ಜನರಲ್ಲಿ ವಿಶ್ವಾಸ ಮೂಡಿಸಿದರೆ ಅಂತಹ ಚಾನೆಲ್‌ಗಳನ್ನು ಮೆಚ್ಚಿಕೊಳ್ಳುತ್ತಾರೆ. ಪ್ರಶಸ್ತಿ ಬಂದವರ ಮೇಲೆ ಜವಾಬ್ದಾರಿ ಹೆಚ್ಚುತ್ತದೆ. ಅದನ್ನು ನಿಭಾಯಿಸುವ ಕೆಲಸವನ್ನು ಅವರು ಮಾಡಬೇಕೆಂದರು.
ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ ಮಾತನಾಡಿ, ಈ ಪ್ರಶಸ್ತಿ ಮೂಲಕ ಪ್ರತಿಭೆಯನ್ನು ಪರಿಚಯಿಸಲಾಗಿದೆ. ಸಾಧನೆ ಮಾಡುವವರಿಗೆ ಇದು ಇನ್ನಷ್ಟು ಹೆಚ್ಚಿನ ಪ್ರೇರೇಪಣೆಯಾಗಿದೆ. ಇಂದು ಮಾಧ್ಯಮ ಜಗತ್ತು ಸ್ಪರ್ಧಾತ್ಮಕವಾಗಿದೆ. ಅದನ್ನು ಕಟ್ಟಿ ಬೆಳೆಸುವುದು ಕಷ್ಟದ ಕೆಲಸ. ಸಮಾಜಮುಖಿಯಾಗಿ, ರಚನಾತ್ಮಕವಾಗಿ ಮತ್ತು ವಿವೇಚನಾಯುತವಾಗಿ ಕೆಲಸ ಮಾಡಿದರೆ  ಅದು ಯಶಸ್ಸು ಕಾಣುತ್ತದೆ ಎಂದರು.

ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್ ಮತ್ತು ಡಿ ಎಸ್ ಅರುಣ್ ಕಾರ್ಯಕ್ರಮದ ಅಚ್ಚುಕಟ್ಟುತನವನ್ನು ಶ್ಲಾಘಿಸಿದರಲ್ಲದೆ, ಇಂತಹ ಕೆಲಸ ಇನ್ನಷ್ಟು ಹೆಚ್ಚಲಿ ಎಂದು ಹಾರೈಸಿದರು.
ಪ್ರಶಸ್ತಿ ಪುರಸ್ಕೃತರನ್ನು ಶಾಲು ಹೊದಿಸಿ, ಹಾರ ಹಾಕಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಚಾನೆಲ್‌ನ ನಿರೂಪಕಿ  ನಂದಿನಿ ಸಾಗರ್ ನಿರೂಪಿಸಿದರು. ಚಾನೆಲ್ ಪ್ರಧಾನ ಸಂಪಾದಕ ಹೊನ್ನಾಳಿ ಚಂದ್ರಶೇಖರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸ್ಟೈಲ್ ಡಾನ್ಸ್‌ನ ಮಕ್ಕಳು ನೃತ್ಯ ಮಾಡಿದರು. ಆದ್ಯ ರಾವ್ ಮತ್ತು ಸಂಗಡಿಗರು ಚಲನಚಿತ್ರ ಗೀತೆ ಹಾಡಿದರು.

ಪ್ರಶಸ್ತಿ ಪುರಸ್ಕೃತರು:

ರಾಗಾ ಸಿಲ್ಕ್ಸ್ ಮಾಲಕಿ ಸುಜಾತಾ ಚನ್ನೇಶ್,ಉದ್ಯಮಿ ಮರಿಸ್ವಾಮಿ, ಕ್ರ್ರಾಂತಿದೀಪ ಪ್ರಾದೇಶಿಕ ಪತ್ರಿಕೆಯ ಸಂಪಾದಕ ಎನ್. ಮಂಜುನಾಥ , ಜಿಲ್ಲಾ ಸ ನೌ ಸಂಘದ ಅಧ್ಯಕ್ಷ ಆರ್. ಮೋಹನ್‌ಕುಮಾರ್,ವಿಧಾತ್ರಿ ಭವನ ಹೊಟೆಲ್‌ಗಳ ಮಾಲಕ ಅವಿನಾಶ್,ಜಿಎಮ್ ಬಯೋಟೆಕ್ ನ  ದುಮ್ಮಳ್ಳಿ ಜಿ ಎಂ ರಘುಮಕ್ಕಳ ತಜ್ಞ ಡಾ|| ಶಂಭುಲಿಂಗ ಬಂಕೊಳ್ಳಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪ್ರಾಚಾರ್ಯೆ ಸುನೀತಾದೇವಿ ರಮೇಶ್,ಕೇಕ್ ಕೆಫೆಯ ಮಾಲಕ ತೀರ್ಥಕುಮಾರ್, ಮಾಜಿ ಕಾರ್ಪೊರೇಟರ್ ಇ.ವಿಶ್ವಾಸ್,ಶಸ್ತ್ರಚಿಕಿತ್ಸಕ ಡಾ|| ಚೇತನ್ ಪಾಂಡೋಮಟ್ಟಿ , ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಯು ಎಚ್ ವೈದ್ಯನಾಥ,ಕಿರುತೆರೆ ರಂಗ ನಟ ಚಂದ್ರಶೇಖರ್ ಶಾಸ್ತ್ರಿ .

Share This Article
";