ಬೆಂಗಳೂರು,ಅ.30 : ನಟ ದಿ. ಡಾ.ವಿಷ್ಣುವರ್ದನ್ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದ್ದು, ಡಾ.ವಿಷ್ಣು ಅವರ ಸಮಾಧಿ ನೆಲಸಮ ಮಾಡಲಾಗಿದ್ದ ಅಭಿಮಾನ್ ಸ್ಟುಡಿಯೋದ ಜಾಗವನ್ನ ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.ಕೆಂಗೇರಿ ಹೋಬಳಿ ಸಮೀಪದಲ್ಲಿರುವ ಅಭಿಮಾನ್ ಸ್ಟುಡಿಯೋ ಭೂಮಿಯನ್ನು ಅರಣ್ಯ ಪ್ರದೇಶ ಎಂದು ಘೋಷಣೆ ಮಾಡಲು ಸರ್ಕಾರದಿಂದ ನಿರ್ಧರಿಸಲಾಗಿದೆ. ಈ ಸಂಬಂಧ ಅರಣ್ಯಾಧಿಕಾರಿಯೊಬ್ಬರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ನಟ ಬಾಲಕೃಷ್ಣ ಅವರ ಕುಟುಂಬದಿಂದ ನಿಯಮ ಉಲ್ಲಂಘನೆ ಆರೋಪ ಹಿನ್ನೆಲೆಯಲ್ಲಿ 10 ಎಕರೆ ಭೂಮ ವಶಕ್ಕೆ ಸರ್ಕಾರ ಮುಂದಾಗಿದೆ. ಸ್ಟುಡಿಯೋ ಹೊರತಾಗಿ ಬೇರೆ ಉದ್ದೇಶಕ್ಕೆ ಜಾಗ ಬಳಸುವಂತಿಲ್ಲ. ಆದರೆ ಈ ಷರತ್ತನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಜಾಗವನ್ನ ಹಿಂಪಡೆಯಲು ಸರ್ಕಾರ ಮುಂದಾಗಿದೆ.20 ಎಕರೆ ಭೂಮಿಯಲ್ಲಿ 12 ಎಕರೆಯನ್ನು ನಟ ಬಾಲಕೃಷ್ಣ ಅವರ ಮಕ್ಕಳು ಮಾರಾಟ ಮಾಡಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ, ಈ ನಿರ್ದಿಷ್ಟ ಪ್ರದೇಶವನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಸರ್ಕಾರ ಮುಂದಾಗಿದೆ ಎಂದು ವರದಿಯಾಗಿದೆ.
1960ರ ದಶಕದಲ್ಲಿ ಹಾಸ್ಯ ನಟ ಬಾಲಕೃಷ್ಣ ಅವರಿಗೆ ಸರ್ಕಾರದಿಂದ 20 ಎಕರೆ ಭೂಮಿಯನ್ನು ಕೊಡಲಾಗಿತ್ತು. ಸರ್ಕಾರದ ನಿಯಮಾನುಸಾರ, 20 ವರ್ಷಗಳವರೆಗೆ ಆ ಭೂಮಿಯನ್ನು ಯಾರಿಗೂ ಪರಭಾರೆ ಮಾಡುವುದಕ್ಕೆ ಅವಕಾಶ ಇರಲಿಲ್ಲ. ಆದರೆ, ಅದರಲ್ಲಿ 12 ಎಕರೆಯಷ್ಟು ಜಾಗವನ್ನು ಬಾಲಕೃಷ್ಣ ಅವರ ಮಕ್ಕಳು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಅವರು ಕೊಟ್ಟಿರುವ ಕಾರಣ, ಅಭಿಮಾನ್ ಸ್ಟುಡಿಯೋ ಕಟ್ಟಲು ಹಣದ ಅವಶ್ಯಕತೆ ಇತ್ತು. ಹೀಗಾಗಿ ಮಾರಾಟ ಮಾಡಿದ್ದಾಗಿ ಹೇಳಿದ್ದಾರೆ ಎಂದು ಹೇಳಲಾಗಿದೆ.ಇದೀಗ ಇನ್ನುಳಿದ ಉಳಿದ ಎಂಟು ಎಕರೆ ಜಾಗವನ್ನು ಜಮೀನು ನೀಡುವಾಗ ವಿಧಿಸಲಾಗಿದ್ದ ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಡದ ರೂಪವಾಗಿ ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ.