ತಿಪಟೂರು,ಜ.7 : ತಾಲ್ಲೂಕಿನ ಕಸಬಾ ಹೋಬಳಿ ರಂಗಾಪುರ ಚಿಕ್ಕಕೊಟ್ಟಿಗೇನಹಳ್ಳಿ ಬಳಿ ಸಾರ್ವಜನಿಕರ ನೆರವಿನೊಂದಿಗೆ ಸೋಮವಾರ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಹಿಡಿದಿದ್ದು, ಮಂಗಳವಾರ ಮೈಸೂರು ಪುನರ್ವಸತಿ ಕೇಂದ್ರಕ್ಕೆ ಬಿಡಲು ಕರೆದೂಯ್ಯಲಾಯಿತು.
ತಾಲ್ಲೂಕಿನ ಚಿಕ್ಕಕೊಟ್ಟಿಗೇನಹಳ್ಳಿ ಗ್ರಾಮದ ಮಲ್ಲಿಕಾರ್ಜುನಯ್ಯ ಅವರ ತೋಟದಲ್ಲಿ ಎರಡು ದಿನದಿಂದ ತೋಟದ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಚಿರತೆಯನ್ನು ಕಂಡು ಸಾರ್ವಜನಿಕರು ಗಾಬರಿಗೊಂಡಿದ್ದರು. ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ನಂತರ ಸುಮಾರು ಮೂರು ವರ್ಷದ ಗಂಡು ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಹರಸಾಹಸ ಪಡಬೇಕಾಯಿತು.
ಸಾರ್ವಜನಿಕರ ಕೂಗಾಟದಿಂದಾಗಿ ಚಿರತೆ ಬಲೆಗೆ ಬೀಳದೆ ತಪ್ಪಿಸಿಕೊಳ್ಳುತ್ತಿತ್ತು. ಸುಸ್ತಾಗಿದ್ದ ಚಿರತೆಯ ಬಾಲವನ್ನು ರಂಗಾಪುರ ಗ್ರಾಮದ ಆನಂದ್ ಎಂಬ ಯುವಕ ಹಿಡಿದಿದ್ದಾರೆ. ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಬೀಸಿದ ಪರಿಣಾಮ ಚಿರತೆ ಸೆರಯಾಗಿದೆ.
ತುಮಕೂರು ಉಪ ಅರಣ್ಯ ಸಂರಕ್ಷಣಾಕಾರಿ ಅನುಪಮ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಕಾರಿ ಭರತ್ ಡಿ., ವಲಯ ಅರಣ್ಯಾಕಾರಿ ಕೆ.ಎಲ್ ಮಧು, ಉಪ ಅರಣ್ಯಾಕಾರಿ ಪ್ರದೀಪ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯ ಕಾರ್ಯಚರಣೆ ನಡೆಸಿದರು.